ADVERTISEMENT

ಸಂಶೋಧನೆ ಉತ್ತೇಜನಕ್ಕೆ ಪ್ರತ್ಯೇಕ ನೀತಿ ಜಾರಿ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ *ಎಚ್.ನರಸಿಂಹಯ್ಯ102ನೇ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:31 IST
Last Updated 6 ಜೂನ್ 2022, 19:31 IST
ಬಸವರಾಜ ಬೊಮ್ಮಾಯಿ ಅವರು ಸಂಸ್ಥೆಯ ರೋಬೋಟಿಕ್ಸ್ ಆ್ಯಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಯೋಗಾಲಯದಲ್ಲಿ ಮಾದರಿಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್.ಎನ್. ನಾಗರಾಜ ರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ
ಬಸವರಾಜ ಬೊಮ್ಮಾಯಿ ಅವರು ಸಂಸ್ಥೆಯ ರೋಬೋಟಿಕ್ಸ್ ಆ್ಯಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಯೋಗಾಲಯದಲ್ಲಿ ಮಾದರಿಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್.ಎನ್. ನಾಗರಾಜ ರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಒಂದು ತಿಂಗಳಲ್ಲಿ ಹೊರಬೀಳಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ನಗರದಲ್ಲಿ ಸೋಮವಾರ ಹಮ್ಮಿಕೊಂಡ ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಅವರ 102ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೋಬೋಟಿಕ್ಸ್ ಆ್ಯಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಯೋಗಾಲಯ ಉದ್ಘಾಟಿಸಿದರು. ಎಚ್. ನರಸಿಂಹಯ್ಯ ಅವರ ಆತ್ಮಕಥನ ‘ಹೋರಾಟದ ಹಾದಿ’ಯ ಅನುವಾದ ‘ಪಾಥ್ ಆಫ್ ಸ್ಟ್ರಗಲ್’ (ಅನು: ಪ್ರಾಧ್ಯಾಪಕ ಪ್ರಮೋದ್ ಮುತಾಲಿಕ್) ಅನ್ನು ಬಿಡುಗಡೆ ಮಾಡಿದರು.

‘ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಸಹಕಾರಿಯಾಗಲಿದೆ. ಕಲಿಕೆ ಹಂತದಲ್ಲಿಯೆ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ಕೇಂದ್ರ ಸರ್ಕಾರವು ಅಟಲ್ ಪ್ರಯೋಗಾಲಯಗಳನ್ನು ಪರಿಚಯಿಸಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿನ ಜ್ಞಾನವನ್ನು ಮಕ್ಕಳು ತಿಳಿಯಲಿ ಎಂಬುವುದು ನಮ್ಮ ಸರ್ಕಾರದ ಆಶಯ’ ಎಂದು ಹೇಳಿದರು.

ADVERTISEMENT

‘ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ರೂಪಿಸಿದೆ. ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಯೋಗಶೀಲತೆಯನ್ನು ತಂದಿರುವ ಈ ಶಿಕ್ಷಣ ನೀತಿ, ವಿಜ್ಞಾನಕ್ಕೆ ಮಹತ್ವ ನೀಡಿದೆ. ಸರ್ಕಾರದ ವತಿಯಿಂದ ಪ್ರತಿ ಶಾಲೆಗೆ ₹ 50 ಲಕ್ಷದಲ್ಲಿ ಅಟಲ್ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಸಂಶೋಧನೆಗೆ ಇದರಿಂದ ಅವಕಾಶ ದೊರೆಯಲಿದೆ’ ಎಂದು ತಿಳಿಸಿದರು.

ಮೂಢನಂಬಿಕೆ ವಿರುದ್ಧ ಹೋರಾಟ: ‘ಈ ದೇಶದ ಸನಾತನ ಮೌಲ್ಯಗಳನ್ನು ಉಳಿಸಿಕೊಂಡು, ಆಧುನಿಕ ಭಾರತ ನಿರ್ಮಾಣ ಮಾಡುವ ಕೆಲಸವನ್ನು ನರಸಿಂಹಯ್ಯ ಮಾಡಿದರು. ವಿಚಾರವಾದಿಯಾಗಿದ್ದ ಅವರು, ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. 1970ರ ದಶಕದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಭಾನಾಮತಿ ವಿರುದ್ಧ ದೊಡ್ಡ ಧ್ವನಿಯಾಗಿ ಹೋರಾಟ ಮಾಡಿ, ಜನರಿಗೆ ಧೈರ್ಯ ತುಂಬಿದರು. ರೈತರ, ಬಡವರ ಬದುಕಿನಲ್ಲಿ ನೆಮ್ಮದಿಯನ್ನು ತಂದುಕೊಟ್ಟರು’ ಎಂದು ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ವಿದ್ಯಾರ್ಥಿಗಳು ಸಮೂಹಗಾಯನ ಪ್ರಸ್ತುತಪಡಿಸಿದರು. ಬಸವರಾಜ ಬೊಮ್ಮಾಯಿ ಅವರು ಮಕ್ಕಳ ಬಳಿ ತೆರಳಿ, ಅವರನ್ನು ಮಾತನಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.