ರಾಜರಾಜೇಶ್ವರಿನಗರ: ನಗರೀಕರಣ ಭರಾಟೆಯಲ್ಲಿ ಯುವಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿ, ಮೊಬೈಲ್ ಗೀಳಿಗೆ ಜೋತು ಬಿದ್ದು ದಿನ ಪತ್ರಿಕೆ, ಪುಸ್ತಕಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಅವರು ಹೇಳಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ನಗರ ಕೇಂದ್ರ ಪಶ್ಚಿಮ ವಲಯ ಮತ್ತು ವಿವಿಧ ಕಾಲೇಜು, ಸಂಘ ಸಂಸ್ಥೆಗಳ ವತಿಯಿಂದ ಕೆಂಗೇರಿ ಉಪನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ದಿನಪತ್ರಿಕೆಗಳು, ಪುಸ್ತಕಗಳ ನಿರಂತರ ಓದಿನಿಂದ ಯುವ ಜನಾಂಗ, ಸಾಮಾಜಿಕ ಬದ್ದತೆ, ಸಮಾಜ ಮುಖಿ ಸೇವಾ ಅಭಿರುಚಿ, ಜ್ಞಾನ ಸಂಪಾದನೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬಹುದು‘ ಎಂದರು.
ಸಾಹಿತಿ ಕರಿಗೌಡ ಬೀಚನಹಳ್ಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ ಹಣ, ಆಸ್ತಿ, ಸಂಪಾದನೆ, ಅಧಿಕಾರವನ್ನು ಕೊಂಡುಕೊಳ್ಳಬಹುದು. ಜ್ಞಾನ ಸಂಪತ್ತು, ವಿದ್ಯೆ, ಸಂಸ್ಕೃತಿ ಪ್ರತಿಭೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಲಕ್ಷ್ಮಿ ನಾರಾಯಣ್, ಉಪ ನಿರ್ದೇಶಕಿ ಎಚ್.ಸಿ.ಪಾರ್ವತಮ್ಮ, ಸಾಹಿತಿ ಎ.ಪಿ.ಕುಮಾರ್ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 400 ವಿದ್ಯಾರ್ಥಿಗಳು ಗ್ರಂಥಾಲಯದ ಸದಸ್ಯತ್ವ ಪಡೆದುಕೊಂಡರು. ನೂರಾರು ವಿದ್ಯಾರ್ಥಿಗಳು, ಸಾಹಿತಿಗಳು, ಕಲಾವಿದರು ಬೃಹತ್ ಜಾಥಾದ ಮೂಲಕ ಪುಸ್ತಕ, ದಿನ ಪತ್ರಿಕೆ ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಿ ಎಂದು ಘೋಷಣೆ ಕೂಗಿ ಕರ ಪತ್ರಗಳನ್ನು ಹಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.