ಬೆಂಗಳೂರು: ‘ರಾಷ್ಟ್ರೀಯ ಪೋಷಣ ಮಾಸಾಚರಣೆಗೆ ಸಂಬಂಧಿಸಿದಂತೆ ಪಿಎಂ ಪೋಷಣ್ ಯೋಜನೆಯ ಇಲ್ಲಿನ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ಹಿಂದಿ ಪದಗಳನ್ನು ಬಳಸಿ, ಕನ್ನಡ ವಿರೋಧಿ ಧೋರಣೆ ಅನುಸರಿಸಿರುವುದು ಖಂಡನೀಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ‘ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಜ್ಯ ಸರ್ಕಾರವು ‘ಪಿಎಂ ಪೋಷಣ್ ಯೋಜನೆ’ ಅನುಷ್ಠಾನಗೊಳಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಸುತ್ತೋಲೆಯಲ್ಲಿ ಅನೇಕ ವ್ಯಾಕರಣ ದೋಷಗಳಿದ್ದು, ಇದು ಸುತ್ತೋಲೆಯ ಗಾಂಭೀರ್ಯಕ್ಕೆ ಚ್ಯುತಿ ತಂದಿದೆ. ‘ಪೋಷಣ್ ಭಿ’, ‘ಪಢಾಯಿ ಭಿ’, ‘ಷೋಷಣ್ ಮಾಹ್’, ‘ರಾಷ್ಟ್ರೀಯ ಪೋಷಣ್’ ಸೇರಿ ಹಲವಾರು ಹಿಂದಿ ಪದಗಳನ್ನು ಕನ್ನಡಕ್ಕೆ ಅನುವಾದಿಸದೆ ಹಾಗೆಯೇ ಬಳಸಲಾಗಿದೆ. ಇಲಾಖೆಯ ಕನ್ನಡ ವಿರೋಧಿ ಧೋರಣೆ ಖಂಡನೀಯ. ರಾಷ್ಟ್ರೀಯ ಪೋಷಣ ಮಾಸಾಚರಣೆಯಲ್ಲಿ ಶಿಕ್ಷಣ ಇಲಾಖೆಯ ಹಿಂದಿ ಹೇರಿಕೆ ಕುರಿತಂತೆ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಿ’ ಎಂದು ತಿಳಿಸಿದ್ದಾರೆ.
‘ಕೇಂದ್ರ ಸರ್ಕಾರದ ಧನ ಸಹಾಯದ ನೆಪದಲ್ಲಿ ಈ ರೀತಿಯ ಹಿಂದಿ ಹೇರಿಕೆ ಅಪೇಕ್ಷಣೀಯವಲ್ಲ. ಇದು ಇಡೀ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಕ್ರಮ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ರಾಜ್ಯ ಸರ್ಕಾರದ ಇಲಾಖೆಗಳ ಆಡಳಿತದಲ್ಲಿ, ವಿಶೇಷವಾಗಿ ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಅಪಸವ್ಯಗಳಿಗೆ ಅವಕಾಶ ಇರಬಾರದು. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಕನ್ನಡ ವಿರೋಧಿಗಳಾದರೆ, ಕನ್ನಡವು ಕರ್ನಾಟಕದಲ್ಲಿ ಉಳಿಯುವ ಪ್ರಾಥಮಿಕ ಅವಕಾಶಗಳನ್ನೇ ಕಳೆದುಕೊಳ್ಳುತ್ತದೆ. ಆಡಳಿತದಲ್ಲಿ ಕನ್ನಡ ಬಳಕೆಯ ಕುರಿತಂತೆ ಅಧಿಕಾರಿಗಳಿಗೆ ಮಾರ್ಗದರ್ಶನದ ಅಗತ್ಯ ಇದ್ದಲ್ಲಿ ಪ್ರಾಧಿಕಾರ ನೆರವಾಗಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.