ADVERTISEMENT

ಎನ್‌ಎಸ್‌ಡಿ ಜಾಲತಾಣಗಳಲ್ಲಿ ಧಾರ್ಮಿಕ ಸಂದೇಶ: ಆಕ್ಷೇಪ

272 ಕಲಾವಿದರು, ಲೇಖಕರು, ಶಿಕ್ಷಣ ತಜ್ಞರು, ಹಳೆ ವಿದ್ಯಾರ್ಥಿಗಳಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 20:35 IST
Last Updated 27 ಅಕ್ಟೋಬರ್ 2021, 20:35 IST
ಎನ್‌ಎಸ್‌ಡಿ ಜಾಲತಾಣದಲ್ಲಿ ಹಬ್ಬದ ದಿನದಂದು ಶುಭಾಶಯ ಕೋರಿರುವ ಚಿತ್ರ
ಎನ್‌ಎಸ್‌ಡಿ ಜಾಲತಾಣದಲ್ಲಿ ಹಬ್ಬದ ದಿನದಂದು ಶುಭಾಶಯ ಕೋರಿರುವ ಚಿತ್ರ   

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಗೆ (ಎನ್‌ಎಸ್‌ಡಿ) ಸಂಬಂಧಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಸಂದೇಶಗಳು ಮತ್ತು ಚಿತ್ರಗಳನ್ನು ಪ್ರಚಾರ ಮಾಡುವ ಮೂಲಕ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಲಾವಿದರು, ಲೇಖಕರು ದೂರಿದ್ದಾರೆ.

ಈ ಬಗ್ಗೆ ಎನ್‌ಎಸ್‌ಡಿ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ 272 ಕಲಾವಿದರು, ಲೇಖಕರು, ಶಿಕ್ಷಣ ತಜ್ಞರು, ನಿವೃತ್ತ ಪ್ರಾಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ.

ಎನ್‌ಎಸ್‌ಡಿ ಜಾಲತಾಣದಲ್ಲಿ ವಿವಿಧ ಧಾರ್ಮಿಕ ಹಬ್ಬಗಳಿಗೂ ಶುಭಾಶಯ ಕೋರಲಾಗಿದೆ. ರಾಷ್ಟ್ರೀಯ ಸಂಸ್ಥೆಯಾಗಿರುವ ಎನ್‌ಎಸ್‌ಡಿ, ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯದ ಜತೆ ಸಂಸ್ಥೆ ಗುರುತಿಸಿ ಕೊಂಡಿಲ್ಲ. ಜತೆಗೆ, ಸರ್ಕಾರಿ ಸಂಸ್ಥೆಗೆ ಸಂಬಂಧಿಸಿದ ಜಾಲತಾಣಗಳಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಪ್ರಚಾರ ಮಾಡುವುದು ಸಲ್ಲದು. ತಕ್ಷಣವೇ ಇದಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಚಿತ್ರಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಕಲೆಯ ಉತ್ತೇಜನಕ್ಕೆ ಮೀಸಲಾಗಿರುವ ಈ ಸಂಸ್ಥೆಯು, ನಿರಂತರವಾಗಿ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಲು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಯತ್ನಿಸಬೇಕು. ಆದರೆ, ಧಾರ್ಮಿಕ ಹಬ್ಬಗಳನ್ನು ಪ್ರಚಾರ ಮಾಡುವುದು ಮುಜುಗರದ ಸಂಗತಿ. ಸಂಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಅಥವಾ ಯಾವುದೇ ರೀತಿಯ ನೆರವು ಅಗತ್ಯ ಇದ್ದಲ್ಲಿ ಹಳೆಯ ವಿದ್ಯಾರ್ಥಿಗಳು, ಕಲಾವಿದರು, ನಿವೃತ್ತ ಪ್ರಾಧ್ಯಾಪಕರನ್ನು ಸಂಪರ್ಕಿಸಬಹುದಾಗಿತ್ತು. ಎಲ್ಲರೂ ಸಂತೋಷದಿಂದ ನೆರವು ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

ಎನ್‌ಎಸ್‌ಡಿ ಆವರಣದಲ್ಲೇ ಎಲ್ಲ ಪ್ರಮುಖ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಸಂಪ್ರದಾಯವೂ ಇದೆ. ಈ ಹಬ್ಬಗಳಲ್ಲಿ ಎಲ್ಲರೂ ಭಾಗವಹಿ ಸುತ್ತಿದ್ದಾರೆ. ಹೀಗಾಗಿ, ಸಂಸ್ಥೆಯು ಎಂದಿಗೂ ಧಾರ್ಮಿಕ ವಿಷಯಕ್ಕೆ ಅಂಟಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಎನ್‌ಎಸ್‌ಡಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಕಟಣೆಗಳು ರಂಗಭೂಮಿ, ಕಲೆ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಸೀಮಿತವಾಗಿರಬೇಕು. ಸಂಸ್ಥೆಯ ಶ್ರೇಷ್ಠತೆ, ಸ್ಥಾನಮಾನ ಮತ್ತು ಪ್ರತಿಷ್ಠೆ ಕಾಪಾಡಲು ಹೆಚ್ಚು ಕಾಳಜಿ ವಹಿಸಬೇಕು ಎಂದು ಕೋರಿದ್ದಾರೆ.

ನಿರ್ದೇಶಕ ಕೆ.ಎಂ. ಚೈತನ್ಯ, ರಂಗನಿರ್ದೇಶಕ ಎಸ್. ರಘುನಂದನ್, ಕಲಾವಿದರಾದ ಅವನಿ ರೈ, ಹಳೆಯ ವಿದ್ಯಾರ್ಥಿಗಳಾದ ಯಶಪಾಲ್‌ ಶರ್ಮಾ, ಮಲ್ಲಿಕಾ ಪ್ರಸಾದ್‌, ಪುಬಾಲಿಸನ್ಯಾಲ್‌ ಮತ್ತಿತರರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.