ಬೆಂಗಳೂರು: ‘ವಿದ್ಯಾರ್ಥಿಗಳಲ್ಲಿನ ವಿಜ್ಞಾನ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ರಾಜ್ಯದ 833 ವಸತಿ ಶಾಲೆಗಳಿಗೆ ದೂರದರ್ಶಕಗಳನ್ನು ಪೂರೈಸಲಾಗುತ್ತಿದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ವಿಜ್ಞಾನವನ್ನು ಚಟುವಟಿಕೆಯ ಮೂಲಕ ಕಲಿಯಲು ಅನುವು ಮಾಡಿಕೊಡುವ ‘ಸ್ಟ್ರೀಮ್ ಲ್ಯಾಬ್’ಗಳ ಪ್ರಾರಂಭಕ್ಕೂ ಯೋಜನೆ ರೂಪಿಸುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಹಾಗೂ ಅರ್ಥ ಮಾಡಿಕೊಳ್ಳುವ ಶಕ್ತಿ ಇನ್ನಷ್ಟು ಮೊನಚಾಗುತ್ತದೆ’ ಎಂದು ಹೇಳಿದರು.
‘ಸೂರ್ಯನ ಅಧ್ಯಯನಕ್ಕೆ ತೆರಳಿರುವ ಆದಿತ್ಯ ಎಲ್–1 ಉಪಗ್ರಹದ ಪ್ರತಿಕೃತಿಯನ್ನು ತಾರಾಲಯದ ಆವರಣದಲ್ಲಿ ಅಳವಡಿಸಲಾಗುತ್ತಿದೆ. ಈ ಸಂಬಂಧ ಇಸ್ರೊ ಜೊತೆ ಈಗಾಗಲೇ ತಾರಾಲಯದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಆವರಣದಲ್ಲಿ ಜಾಗ ಸಿದ್ದಗೊಂಡ ಬಳಿಕ ಪ್ರತಿಕೃತಿಯನ್ನು ತಂದು ಅಳವಡಿಸಲಾಗುತ್ತದೆ’ ಎಂದು ವಿವರಿಸಿದರು.
‘ತಾರಾಲಯದ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬೋಧನಾ ಕೊಠಡಿಗಳು, ಆಡಿಯೊ, ವಿಡಿಯೊ ವಿಶ್ಯುವಲ್ ಉಪಕರಣಗಳನ್ನು ಅಳವಡಿಸಿರುವ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಉದ್ಘಾಟಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್, ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಉಪಾಧ್ಯಕ್ಷ ಡಾ. ಟಿ.ಕೆ ಅಲೆಕ್ಸ್, ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಗುರುಪ್ರಸಾದ್, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಉತ್ತಮ ಸ್ಪಂದನೆ: ‘ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ’ ಅಂಗವಾಗಿ ತಾರಾಲಯದ ಆವರಣದಲ್ಲಿ ಆಯೋಜಿಸಿದ್ದ ಪೇಂಟಿಂಗ್, ಆಶುಭಾಷಣ ಸ್ಪರ್ಧೆ, ಜಿಗ್–ಸಾ ಪಜಲ್, ರಸಪ್ರಶ್ನೆ ಸ್ಪರ್ಧೆಗಳಲ್ಲಿ ನಗರದ ವಿವಿಧ ಶಾಲೆಗಳ ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸ್ಥಳದಲ್ಲೇ ಪೇಂಟಿಂಗ್ ರಚಿಸಿದರು. ಆಶುಭಾಷಣ(ಪಿಕ್ ಆ್ಯಂಡ್ ಸ್ಪೀಚ್) ಸ್ಪರ್ಧೆಗಳಲ್ಲಿ 7 ರಿಂದ 10ನೇ ತರಗತಿಯ ಮಕ್ಕಳು ಚಟುವಟಿಕೆಯಿಂದ ಪಾಲ್ಗೊಂಡಿದ್ದರು. ಮಕ್ಕಳ ಜೊತೆಗೆ ಪೋಷಕರು ಕೂಡ ಆಸಕ್ತಿಯಿಂದ ಪಾಲ್ಗೊಂಡಿದ್ದರು. ತಾರಾಲಯದ ಆವರಣದಲ್ಲಿ ಪ್ರದರ್ಶಿಸಲಾಗಿದ್ದ ಮಳಿಗೆಗಳಿಗೂ ಮಕ್ಕಳೊಂದಿಗೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.