ಬೆಂಗಳೂರು: ‘ದಲಿತ ಕವಿ ಸಿದ್ಧಲಿಂಗಯ್ಯ ಅವರ ಕವಿತೆಗಳು ನಾಡಿನ ಚೈತನ್ಯವನ್ನು ಹೆಚ್ಚಿಸಿದ್ದವು’ ಎಂದು ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿದರು.
ಜಯನಗರದ ವಿಜಯ ಕಾಲೇಜು ಮತ್ತು ಶಂಪಾ ಪ್ರತಿಷ್ಠಾನ ಆಯೋ ಜಿಸಿದ್ದ ‘ಸಿದ್ದಲಿಂಗಯ್ಯ ಅವರ ಬದುಕು–ಬರಹ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿಮಾತನಾಡಿದರು.
‘1970 ಮತ್ತು 1980ರ ದಶಕದಲ್ಲಿ ಕಾಲೇಜುಗಳಲ್ಲಿ ಪಠ್ಯದಲ್ಲಿ ಓದುತ್ತಿದ್ದ ಸಾಹಿತ್ಯ ನಮ್ಮಲ್ಲಿ ಸಾಹಿತ್ಯದ ಸೂಕ್ಷ್ಮದ ಬಗ್ಗೆ ತಿಳಿದುಕೊಳ್ಳಲು ನೆರವಾದವು. ಅದೇ ಹೊತ್ತಿನಲ್ಲಿ ಬೀದಿ ಬೀದಿಗಳಲ್ಲಿ, ಗೋಡೆಗಳ ಮೇಲೆ ಸಿದ್ಧಲಿಂಗಯ್ಯನವರ ಪದ್ಯಗಳು ರಾರಾಜಿಸುತ್ತಿದ್ದವು. ಅವು ನಮ್ಮ ಬದುಕಿನ ಭಾಗವೇ ಎನ್ನಿಸುವಂತಿದ್ದವು. ಆದ್ದರಿಂದ ಅವು ನಮ್ಮ ಎದೆಗೆ ಮುಟ್ಟುತ್ತಿದ್ದವು’ ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರ ಮಂಗಲ ರಾಮೇಗೌಡ, ‘ಸಿದ್ಧಲಿಂಗಯ್ಯ ಅವರು ಚಿಕ್ಕಂದಿನಿಂದಲೇ ಹಸಿವು ಮತ್ತು ಶೋಷಣೆಯನ್ನು ಕಂಡವರು. ಅದರ ವಿರುದ್ಧದ ಆಕ್ರೋಶ ಮುಂದೆ ಪದ್ಯವಾಗಿ ಹೊರ ಬಂದವು’ ಎಂದರು.
‘ಡಾ.ಸಿದ್ಧಲಿಂಗಯ್ಯ: ಒಡನಾಟದ ರಸನಿಮಿಷಗಳು’ ಕುರಿತು ಸಾಹಿತಿ ಬಿ.ಟಿ.ಲಲಿತಾ ನಾಯಕ್, ಸಿದ್ಧಲಿಂಗಯ್ಯನವರ ಆತ್ಮಕತೆ ‘ಊರುಕೇರಿ’ ಕುರಿತು ಲೇಖಕ ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.