ADVERTISEMENT

ಫೆ.24, 25ರಂದು ಐಕ್ಯತಾ ಸಮಾವೇಶ: ಸಿದ್ದರಾಮಯ್ಯ

ಮೇಧಾ ಪಾಟ್ಕರ್, ಕಾಂಚಾ ಐಲಯ್ಯ, ಪ್ರಶಾಂತಭೂಷಣ್ ಭಾಗಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 15:59 IST
Last Updated 17 ಫೆಬ್ರುವರಿ 2024, 15:59 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಸಂವಿಧಾನ ಜಾರಿಯಾಗಿ 75 ವರ್ಷ ಪೂರೈಸಿರುವ ಪ್ರಯುಕ್ತ ರಾಜ್ಯ ಸರ್ಕಾರದ ವತಿಯಿಂದ ಫೆಬ್ರುವರಿ 24 ಮತ್ತು 25ರಂದು ಬೆಂಗಳೂರಿನಲ್ಲಿ ‘ರಾಷ್ಟ್ರೀಯ ಐಕ್ಯತಾ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ‘ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಜನವರಿ 26 ರಿಂದ ರಾಜ್ಯದಾದ್ಯಂತ ಸಂವಿಧಾನ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವು ಫೆ.23ಕ್ಕೆ ಕೊನೆಗೊಳ್ಳಲಿದೆ. ಫೆ. 24ರಂದು ಐಕ್ಯತಾ ಸಮಾವೇಶದ ಉದ್ಘಾಟನೆ ಹಾಗೂ 26ರಂದು ಬೃಹತ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಚಿಂತಕರಾದ ಆಶುತೋಶ್ ವರ್ಶನಿ, ಜಿ.ಎನ್‌.ದೇವಿ, ಪ್ರೊ.ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ. ಕಾಂಚಾ ಐಲಯ್ಯ, ವಕೀಲ ಪ್ರಶಾಂತ್ ಭೂಷಣ್, ಸಫಾಯಿ ಕರ್ಮಚಾರಿ ಆಂದೋಲನದ ನಾಯಕ ಬೆಜವಾಡ ವಿಲ್ಸನ್ , ಹೋರಾಟಗಾರ್ತಿ ಮೇಧಾ ಪಾಟ್ಕರ್ ಸೇರಿದಂತೆ ಹಲವರು ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಜಾತ್ಯತೀತತೆ, ಸಮಾನತೆ, ಭ್ರಾತೃತ್ವ ತತ್ವಗಳು ಸಂವಿಧಾನದ ತಳಹದಿ. ಅವುಗಳಿಗೆ ಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕಾಗಿರುವುದು ಎಲ್ಲ ನಾಗರಿಕರ ಜವಾಬ್ದಾರಿ. ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಬೇಕಿದೆ. ಇದಕ್ಕಾಗಿ ಸಂವಿಧಾನದ ಕುರಿತು ಜನರಲ್ಲಿ ಜಾಗೃತಿ ಮೂಡಬೇಕಿದೆ. ಜಾಗೃತಿ ಮೂಡಿಸುವುದಕ್ಕಾಗಿಯೇ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.