ಬೆಂಗಳೂರು: ನಗರದ ವಿವಿಧ ಕೇಂದ್ರಗಳಲ್ಲಿ ಭಾನುವಾರ ‘ನೀಟ್’ ಪರೀಕ್ಷೆ ಯಶಸ್ವಿಯಾಗಿ ಕೊನೆಗೊಂಡಿದ್ದರೂ, ರೈಲು ವಿಳಂಬ, ಪರೀಕ್ಷಾ ಕೇಂದ್ರದ ಬದಲಾವಣೆಗಳಿಂದ ಪರೀಕ್ಷೆ ಬರೆಯಲಾಗದವರ ಕಣ್ಣೀರಿನ ಕಥೆಯೇ ಹೃದಯ ಹಿಂಡಿಬಿಟ್ಟಿತು.
500ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗದೆ ಪರಿತಪಿಸಿದರೆ, ಪರೀಕ್ಷೆ ಬರೆದವರು ಮಾತ್ರ ಬಹುತೇಕ ಸಂತಸದಿಂದ ಬೀಗುತ್ತಿದ್ದುದು ಕಂಡುಬಂತು. ಭೌತವಿಜ್ಞಾನದ ಪ್ರಶ್ನೆಗಳು ಕಠಿಣವಾಗಿದ್ದವು. ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನದ ಪ್ರಶ್ನೆಗಳು ಅಷ್ಟೇನೂ ಕಷ್ಟವಿರಲಿಲ್ಲ ಎಂಬ ಅಭಿಪ್ರಾಯ ಹಲವು ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.
ಪ್ರತಿಭಟನೆ: ‘ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡಬಾರದು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಎಡವಟ್ಟಿನಿಂದಾಗಿ ಈ ತೊಂದರೆ ಉಂಟಾಗಿದೆ. ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.
‘ಕೊನೆಯ ಕ್ಷಣದಲ್ಲಿ ಪರೀಕ್ಷಾ ಕೇಂದ್ರ ಬದಲಿಸಿದ್ದು ತಪ್ಪು. ಕೇಂದ್ರವನ್ನು ಬದಲಿಸಿದರೂ, ಬದಲಿ ಕೇಂದ್ರವನ್ನು ಸಮೀಪದಲ್ಲೇ ಇರುವಂತೆ ನೋಡಿಕೊಳ್ಳಬೇಕಿತ್ತು. 30 ಕಿ.ಮೀ.ಗೂ ಅಧಿಕ ದೂರದಲ್ಲಿ ಬದಲಿ ಪರೀಕ್ಷಾ ಕೇಂದ್ರ ನಿಗದಿ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗಿದೆ’ ಎಂದು ಪ್ರತಿಭಟನಕಾರರು ದೂರಿದರು. ಎಬಿವಿಪಿ ಕೇಂದ್ರ ಜಿಲ್ಲಾ ಸಂಚಾಲಕ ಸುಭಾಷ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಶಾಂತ ಬಸವನಗುಡಿ, ಜಿಲ್ಲಾ ಸಂಚಾಲಕ ಅರುಣ ಇದ್ದರು.
ದುಗುಡ: ಭಾನುವಾರ ಮಧ್ಯಾಹ್ನ ನಗರದ ಹಲವು ಕೇಂದ್ರಗಳು ನೀಟ್ ಪರೀಕ್ಷೆಗೆ ಸಿದ್ಧವಾಗುತ್ತಿದ್ದಾಗ, ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ನೂರಾರು ಮಂದಿ ಮಾತ್ರ ಆತಂಕದಲ್ಲಿದ್ದರು. ನಗರಕ್ಕೆ ಅವರು ಬಂದು ತಲುಪುವಾಗ 2.30 ಕಳೆದಿತ್ತು. ಅವರು 1.30ಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ ಇರಬೇಕಿತ್ತು. ಹೀಗಾಗಿ ನಗರದ ಸಿಟಿ ರೈಲು ನಿಲ್ದಾಣದಲ್ಲಿ ನೀಟ್ ಪ್ರವೇಶ ಪತ್ರ ಹಿಡಿದುಕೊಂಡು ವಿದ್ಯಾರ್ಥಿಗಳು ಅಳುತ್ತಿದ್ದ ದೃಶ್ಯ ಹೃದಯ ಕರಗಿಸುವಂತ್ತಿತ್ತು.
ಆರ್ಥಿಕ ಅನುಕೂಲ ಇದ್ದ ಕೆಲವರು ತುಮಕೂರಿನಿಂದ ಕಾರು ಮಾಡಿಕೊಂಡು ನಗರಕ್ಕೆ ಬಂದಿದ್ದರು. ಆದರೆ, ರೈಲನ್ನೇ ನಂಬಿಕೊಂಡು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಬಂದಿದ್ದ ನೂರಾರು ಮಂದಿಗೆ ಮಾತ್ರ ಪರೀಕ್ಷೆ ಬರೆಯುವುದು ಸಾಧ್ಯವಾಗಲೇ ಇಲ್ಲ.
ಪರೀಕ್ಷಾ ಕೇಂದ್ರದಲ್ಲಿ: ‘ಪರೀಕ್ಷಾ ಕೇಂದ್ರ ಬದಲಾವಣೆಯ ಕುರಿತು ಮೂರು ದಿನಗಳ ಮೊದಲು ಧ್ವನಿ ಸಂದೇಶ ಹಾಗೂ ಇ ಮೇಲ್ ಮೂಲಕ ಮಾಹಿತಿ ನೀಡಿದ್ದರು. ಅದನ್ನು ಗಮನಿಸಿ ಹೊಸ ಕೇಂದ್ರಕ್ಕೆ ಮಗಳನ್ನು ಕರೆದುಕೊಂಡು ಬಂದೆ’ ಎಂದು ದಯಾನಂದ ಸಾಗರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪೋಷಕರೊಬ್ಬರು ತಿಳಿಸಿದರು.
‘ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಿರುತ್ತಾರೆ. ಅವರು ಇ ಮೇಲ್ ನೋಡದಿರಬಹುದು, ಮೊಬೈಲ್ ಬಳಸದೆ ಇರಬಹುದು. ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಕೇಂದ್ರ ಬದಲಾವಣೆಯ ಕುರಿತು ಮಾಹಿತಿ ತಲುಪಿಲ್ಲ. ಈ ವಿಷಯದಲ್ಲಿ ಸಮರ್ಪಕವಾಗಿ ಸಂವಹನ ನಡೆಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.
‘ಬದಲಾವಣೆಯ ಕುರಿತು ಕೊನೆ ಗಳಿಗೆಯಲ್ಲಿ ಕೇವಲ ಸಂದೇಶಗಳನ್ನು ಕಳುಹಿಸುವ ಬದಲು ಎಲ್ಲ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರೆ ಬಹುತೇಕರಿಗೆ ಮಾಹಿತಿ ತಲುಪುತ್ತಿತ್ತು’ ಎಂದು ಮಗಳ ಜತೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಶಿಡ್ಲಘಟ್ಟದ ಅನಸೂಯ ತಿಳಿಸಿದರು.
‘ನಿರ್ಲಕ್ಷ್ಯ’
‘ವರ್ಷದಲ್ಲಿ ಒಮ್ಮೆ ಮಾತ್ರ ನೀಟ್ ನಡೆಸಲಾಗುತ್ತದೆ. ಅದನ್ನೂ ಸಮರ್ಪಕವಾಗಿ ನಡೆಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಪರೀಕ್ಷಾ ಕೇಂದ್ರ ಬದಲಾಗಿ ವಿದ್ಯಾರ್ಥಿಗಳಿಗೆ ಉಂಟಾಗಿರುವ ಕಷ್ಟಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯೇ ನೇರ ಹೊಣೆ’ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಹೇಳಿದ್ದಾರೆ.
**
ಪರೀಕ್ಷಾ ಕೇಂದ್ರಕ್ಕೆ ಒಂದು ದಿನ ಮುಂಚಿತವಾಗಿಯೇ ಬಂದು ನೋಡಿಕೊಂಡು ಹೋಗಿದ್ದೆ. ಆದಷ್ಟು ಚೆನ್ನಾಗಿಯೇ ಪರೀಕ್ಷೆ ಬರೆದಿದ್ದೇನೆ.
-ಸಚಿನ್ ಗೌಡ,ತಿಪಟೂರು
**
ಭೌತವಿಜ್ಞಾನದ ಪ್ರಶ್ನೆಗಳು ಕಠಿಣವಾಗಿದ್ದವು. ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನದ ಪ್ರಶ್ನೆಗಳು ಅಷ್ಟೇನೂ ಕಷ್ಟವಿರಲಿಲ್ಲ.
-ನಿರುಪಮಾ,ಆರ್.ಟಿ.ನಗರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.