ADVERTISEMENT

ನೀಟ್, ನೆಟ್‌ ಪರೀಕ್ಷೆಗಳಲ್ಲಿ ಹಗರಣ: ತನಿಖೆಗೆ ಎಐಡಿಎಸ್‌ಒ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:30 IST
Last Updated 15 ಜುಲೈ 2024, 15:30 IST
ನೀಟ್‌ ಮತ್ತು ನೆಟ್‌ ಪರೀಕ್ಷೆಗಳಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆಗೆ ಆಗ್ರಹಿಸಿ ಬೆಂಗಳೂರಿನ ಯುವಿಸಿಇ ಅಲುಮ್ನಿ ಅಸೋಸಿಯೇಶನ್ ಸಭಾಂಗಣದಲ್ಲಿ ಸೋಮವಾರ ಎಐಡಿಎಸ್‌ಒ ವತಿಯಿಂದ ವಿದ್ಯಾರ್ಥಿಗಳ ಸಮಾವೇಶ ನಡೆಯಿತು. – ಪ್ರಜಾವಾಣಿ ಚಿತ್ರ
ನೀಟ್‌ ಮತ್ತು ನೆಟ್‌ ಪರೀಕ್ಷೆಗಳಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆಗೆ ಆಗ್ರಹಿಸಿ ಬೆಂಗಳೂರಿನ ಯುವಿಸಿಇ ಅಲುಮ್ನಿ ಅಸೋಸಿಯೇಶನ್ ಸಭಾಂಗಣದಲ್ಲಿ ಸೋಮವಾರ ಎಐಡಿಎಸ್‌ಒ ವತಿಯಿಂದ ವಿದ್ಯಾರ್ಥಿಗಳ ಸಮಾವೇಶ ನಡೆಯಿತು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ನೀಟ್‌ ಮತ್ತು ನೆಟ್‌ ಪರೀಕ್ಷೆಗಳಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸಮಾವೇಶದಲ್ಲಿ ಎಐಡಿಎಸ್‌ಒ ಖಜಾಂಚಿ ಸುಭಾಷ್‌ ಮಾತನಾಡಿ, ‘ನೀಟ್, ಯು.ಜಿ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ’ ಎಂದು ದೂರಿದರು.

‘ಈ ಮುಂಚೆ ರಾಜ್ಯಮಟ್ಟದಲ್ಲಿ ಜಂಟಿ ಪ್ರವೇಶ ಪರೀಕ್ಷೆಗಳು ಜಾರಿಯಲ್ಲಿದ್ದಾಗ, ಭ್ರಷ್ಟಾಚಾರದ ಕಾರಣ ಒಡ್ಡಿ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯನ್ನು ಪ್ರಾರಂಭಿಸಲಾಗಿತ್ತು. ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಶಿಕ್ಷೆ ವಿಧಿಸುವುದರ ಬದಲಿಗೆ ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು ಪರಿಹಾರವಲ್ಲ ಎಂದು ಎಐಡಿಎಸ್‌ಒ ಆ ಸಂದರ್ಭದಲ್ಲೇ ಎಚ್ಚರಿಕೆ ನೀಡಿತ್ತು. ಅದು ಇಂದು ನಿಜವಾಗಿದೆ. ಸರ್ಕಾರದ ನಿಷ್ಕಾಳಜಿ ಮತ್ತು ಪರೀಕ್ಷಾ ವ್ಯವಸ್ಥೆಯ ವ್ಯಾಪಾರೀಕರಣದಿಂದಾಗಿ ಅಮಾಯಕ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯಾ ದಿವಾಕರ್ ಮಾತನಾಡಿ, ‘ನೀಟ್ ಹಾಗೂ ನೆಟ್ ಪರೀಕ್ಷೆಗಳಲ್ಲಿ ನಡೆದಿರುವ ಹಗರಣವು ಶೈಕ್ಷಣಿಕ ಕ್ಷೇತ್ರದ ಅತಿ ದೊಡ್ದ‌ ಹಗರಣವಾಗಿದೆ. ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಹಗರಣದಲ್ಲೇ ಮುಳುಗಿದ ಸಂಸ್ಥೆಯ ಮುಖ್ಯಸ್ಥರನ್ನೇ ನೇಮಿಸಿರುವುದು ವಿಪರ್ಯಾಸ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು. ಎನ್‌ಟಿಎ ರದ್ದುಪಡಿಸಬೇಕು. ನೀಟ್‌–ಯುಜಿ, ಯುಜಿಸಿ–ನೆಟ್‌ ಮತ್ತು ನೀಟ್‌–ಪಿಜಿಗೆ ಸಂಬಂಧಿಸಿದ ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು’ ಎಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.

ಎಐಡಿಎಸ್‌ಒ ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷರಾದ ಅಪೂರ್ವ, ಚಂದ್ರಕಲಾ, ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.