ಕೆಂಗೇರಿ: ಕಳೆದ ವಾರ ಸುರಿದ ಒಂದೇ ಮಳೆಗೆ ತ್ಯಾಜ್ಯದ ಆಗರವಾಗಿದ್ದ ಕೆಂಗೇರಿ ಉಪನಗರ ಬಳಿಯ ಹೊಸಕೆರೆಯಲ್ಲಿ ಈಗ ನಾಯಿಗಳ ಶವಗಳು ತೇಲುತ್ತಿವೆ.
ಮಳೆಯಿಂದ ಕೆರೆಯಲ್ಲಿ ನೀರಿಗಿಂತ ಹೆಚ್ಚು ತ್ಯಾಜ್ಯವೇ ಸಂಗ್ರಹವಾಗಿತ್ತು. ಕೆರೆ ಸುತ್ತಮುತ್ತ ಜನರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕೆರೆಯಲ್ಲಿ ನಾಯಿಗಳ ಶವ ತೇಲಾಡುತ್ತಿದ್ದು, ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಶುಕ್ರವಾರ ಮುಂಜಾನೆ ಕೆರೆಯಲ್ಲಿ ನಾಯಿಗಳ ನಾಲ್ಕು ಶವ ಕಂಡು ಬಂದಿದೆ. ಇದನ್ನು ಗಮನಿಸಿದ ಕೆರೆಯ ಗಾರ್ಡ್‌ಗಳು ಅವುಗಳನ್ನು ಕೆರೆಯಿಂದ ತೆಗೆದು ಹೊರಗೆ ಹಾಕಿದ್ದಾರೆ.
‘ನಿರ್ವಹಣೆ ಕೊರತೆಯಿಂದ ಕೊಳಚೆ ನೀರು ನಿರಂತರವಾಗಿ ಕೆರೆ ಅಂಗಳವನ್ನು ಸೇರುತ್ತಿದೆ. ಅಕ್ಕಪಕ್ಕದ ನಿವಾಸಿಗಳು ಕಸ ಕಡ್ಡಿಗಳನ್ನು, ಸತ್ತ ಸಾಕು ಪ್ರಾಣಿಗಳನ್ನು ಕೆರೆಯ ಬಳಿ ಬಿಸಾಡಿ ಹೋಗುತ್ತಿದ್ದಾರೆ. ಕೆರೆಗೆ ತ್ಯಾಜ್ಯ ಹರಿಯುವುದನ್ನು ತಡೆಯಲು ಕೊಳವೆಗಳಿಗೆ ಜಾಲರಿಗಳನ್ನೂ ಅಳವಡಿಸಿಲ್ಲ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಕೆರೆ ಅವಸಾನದ ಅಂಚು ತಲುಪುತ್ತಿದೆ’ ಎಂದು ಸ್ಥಳೀಯ ನಿವಾಸಿ ಗುರು ಬೇಸರ ವ್ಯಕ್ತಪಡಿಸಿದರು.
‘ಕೆರೆ ಅಭಿವೃದ್ಧಿಗೆ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ₹15 ಕೋಟಿಗೂ ಹೆಚ್ಚು ಹಣ ವ್ಯಯ ಮಾಡಲಾಗಿದೆ. ಆದರೂ ಕೊಳಚೆ ನೀರು ಕೆರೆ ಒಡಲನ್ನು ಸೇರುವುದು ತಪ್ಪಿಲ್ಲ. ಕೆರೆ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ವಳಗೇರಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎನ್. ಕದರಪ್ಪ ದೂರಿದರು.
ಬಿಬಿಎಂಪಿ ಕೆರೆ ವಿಭಾಗದ ಎಇಇ ಮಹೇಶ್ ಮಾತನಾಡಿ, ‘ಜಾಲರಿ ಹಾಗೂ ತಂತಿ ಬೇಲಿ ಅಳವಡಿಕೆಗೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಚುನಾವಣೆ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕೆರೆ ಸಂರಕ್ಷಣೆ ಹಾಗೂ ಶುಚಿತ್ವಕ್ಕೆ ಇಲಾಖೆಯ ಜವಾಬ್ದಾರಿಯೊಂದಿಗೆ ನಾಗರಿಕರ ಸಹಕಾರವೂ ಬೇಕಾಗಿರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.