ಬೆಂಗಳೂರು: ನಿಯಮಬದ್ಧವಿಲ್ಲದ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ಇಂದಿರಾನಗರದಲ್ಲಿರುವ ‘ಐ ಚೇಂಜ್ ಇಂದಿರಾನಗರ’, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟವು (ಆರ್‌ಡಬ್ಲ್ಯುಎ) ರಾಜ್ಯಪಾಲರು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿ.ಜೆ) ಪತ್ರ ಬರೆದಿದೆ.
ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ಕಚೇರಿ ಮತ್ತು ಮುಖ್ಯ ಕಾರ್ಯದರ್ಶಿಯವರಿಗೂ ರವಾನಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳ ಈ ನಿರ್ಲಕ್ಷ್ಯದಿಂದಾಗಿ ಇಂದಿರಾನಗರದಲ್ಲಿ ಪಾರ್ಕಿಂಗ್ ಸಮಸ್ಯೆ, ಅಧಿಕ ಮಾಲಿನ್ಯ, ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ಉಂಟಾಗಿದೆ. ಇದು ನಿವಾಸಿಗಳ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ಐ ಚೇಂಜ್ ಇಂದಿರಾನಗರ’ದ ಸ್ನೇಹಾ ನಂದಿಹಾಳ್, ಡಿಫೆನ್ಸ್ ಕಾಲೊನಿ ನಿವಾಸಿಗಳ ಸಂಘದ ಅಶೋಕ್ ಶರತ್, ಇಂದಿರಾನಗರ ಒಂದನೇ ಹಂತದ ವೆಲ್ಫೇರ್ ಲೀಗ್‌ನ ಸ್ವರ್ಣಾ ವೆಂಕಟರಮಣ ಸೇರಿದಂತೆ ಹಲವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
‘ನಿಯಮ ಮೀರಿ ನಿರ್ಮಿಸಿರುವ ಕಟ್ಟಡಗಳನ್ನು ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗ ಪರಿಶೀಲಿಸುವುದಿಲ್ಲ. ಬಿಬಿಎಂಪಿ ಕಾಯ್ದೆ–2020 ಅಥವಾ ಪರಿಷ್ಕೃತ ಮಹಾ ಯೋಜನೆ–2015 ಅನ್ನು ಜಾರಿಗೊಳಿಸಿಲ್ಲ. ಇದರಿಂದಾಗಿ ವಸತಿ ಪ್ರದೇಶವಾಗಿ ಗುರುತಿಸಿಕೊಂಡಿರುವ ಇಂದಿರಾನಗರದಲ್ಲಿ ಉದ್ಯಮಗಳಿಂದ ಸಮಸ್ಯೆ ಉಂಟಾಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.