ADVERTISEMENT

ಸರ್ಕಾರಿ ಕಾಲೇಜಿಗೆ ನಿವೇಶನ ನೀಡಲು ಬಿಡಿಎ ನಿರ್ಲಕ್ಷ್ಯ

ಆರ್. ಮಂಜುನಾಥ್
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
ಕೆಂಗೇರಿ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕೆಂಗೇರಿ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಬೆಂಗಳೂರು: ಸರ್ಕಾರಿ ಶಾಲೆ– ಕಾಲೇಜುಗಳನ್ನು ಖಾಸಗಿ ಸಂಸ್ಥೆಗಳ ಮಟ್ಟಕ್ಕೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಸರ್ಕಾರಿ ಕಾಲೇಜಿಗೆಂದೇ ಮೀಸಲಿಟ್ಟ ನಿವೇಶನವನ್ನು ಹಂಚಿಕೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಶಕಗಳಿಂದ ನಿರ್ಲಕ್ಷ್ಯ ವಹಿಸಿದೆ.

ಎರಡು ದಶಕದ ಹಿಂದೆ ಬಿಡಿಎ ನಿರ್ಮಿಸಿರುವ ಸರ್‌ ಎಂ. ವಿಶ್ವೇಶ್ವರಯ್ಯ (ಎಸ್‌ಎಂವಿ) ಬಡಾವಣೆಯ ಒಂದನೇ ಬ್ಲಾಕ್‌ನಲ್ಲಿ ಸಂಖ್ಯೆ 3ರ ನಾಗರಿಕ ಸೌಲಭ್ಯ (ಸಿಎ) ನಿವೇಶನವನ್ನು ಸರ್ಕಾರಿ ಕಾಲೇಜಿಗಾಗಿ ಮೀಸಲಿಡಲಾಗಿದೆ. ಆದರೆ, ಈವರೆಗೂ ಶಿಕ್ಷಣ ಇಲಾಖೆಗೆ ಬಿಡಿಎ ನಿವೇಶನವನ್ನು ಹಂಚಿಕೆ ಮಾಡಿಲ್ಲ.

‘ಕೆಂಗೇರಿ ಪ್ರಥಮ ದರ್ಜೆ ಕಾಲೇಜಿಗೆ ಮೀಸಲಿಟ್ಟಿರುವ ಸಿಎ ನಿವೇಶನವನ್ನು ಹಂಚಿಕೆ ಮಾಡಬೇಕು’ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಬಿಡಿಎಗೆ ಪತ್ರ ಬರೆದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಯಶವಂತಪುರ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್‌ ಅವರೂ ಬಿಡಿಎ ಆಯುಕ್ತರು, ಅಧ್ಯಕ್ಷರಿಗೆ ನಾಲ್ಕು ಬಾರಿ ಪತ್ರ ಬರೆದಿದ್ದಾರೆ.

ADVERTISEMENT

ಬಿಡಿಎ ಎಸ್ಟೇಟ್ ಅಧಿಕಾರಿಗಳು ಜುಲೈನಲ್ಲಿ ‘ನಿವೇಶನವನ್ನು ಯಾರ ಹೆಸರಿನಲ್ಲಿ ಹಂಚಿಕೆ ಮಾಡಿ, 30 ವರ್ಷಗಳ ಗುತ್ತಿಗೆ ಕರಾರು ಮಾಡಬೇಕು’ ಎಂದು ಕೇಳಿದ್ದಾರೆ. ಅದಕ್ಕೆ ಉತ್ತಸಿರುವ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ‘ಕೆಂಗೇರಿ ಪ್ರಥಮ ದರ್ಜೆ ಕಾಲೇಜಿಗೆ’ ಹಂಚಿಕೆ ಮಾಡಿ ಎಂದು ಕೋರಿಕೊಂಡಿದ್ದಾರೆ. ಜುಲೈ ನಂತರ ಈವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ.

‘ಕೆಂಗೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ ಬಿಬಿಎಂ ಸೇರಿದಂತೆ ಐದು ಕೋರ್ಸ್‌ಗಳಿದ್ದು, 1,100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಕೆಂಗೇರಿ ಪ್ರೌಢಶಾಲೆಯ ಕಟ್ಟಡದಲ್ಲೇ ಕಾಲೇಜು ನಡೆಯುತ್ತಿದೆ. ಖಾಸಗಿ ಕಾಲೇಜುಗಳಿಗಿಂತ ಹೆಚ್ಚು ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ’ ಎಂದು ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎ.ವಿ. ಲಕ್ಷ್ಮೀನಾರಾಯಣ ತಿಳಿಸಿದರು.

‘ಶಾಲೆಯಲ್ಲಿ ಈಗಿರುವ ವಿದ್ಯಾರ್ಥಿಗಳಿಗೆ ಕನಿಷ್ಠ 30 ಕೊಠಡಿಗಳ ಅಗತ್ಯವಿದೆ. ಆದರೆ, 13 ಕೊಠಡಿಗಳು ಹಾಗೂ ಕಟ್ಟಡದ ಮೇಲ್ಭಾಗದಲ್ಲಿ ತರಗತಿಗಳು ನಡೆಯುತ್ತಿವೆ. ವಿಜ್ಞಾನ ವಿಭಾಗಕ್ಕೆ ಪ್ರಯೋಗಾಲಯ, ಗ್ರಂಥಾಲಯ, ಉಪನ್ಯಾಸಕರಿಗೆ ಕೊಠಡಿಗಳು ಇಲ್ಲ’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ಕಾಲೇಜಿಗೆಂದೇ ಮೀಸಲಾಗಿರುವ ಸಿಎ ನಿವೇಶನವನ್ನು ಶಿಕ್ಷಣ ಇಲಾಖೆಗೆ ಹಂಚಿಕೆ ಮಾಡಲು ಒಂದು ವರ್ಷದಿಂದ ಪತ್ರಗಳನ್ನು ಬರೆಯಲಾಗಿದೆ. ವೈಯಕ್ತಿಕವಾಗಿಯೂ ಬಿಡಿಎ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಟ್ಟಡ ಹಾಗೂ ಆಧುನಿಕ ಸೌಲಭ್ಯಗಳ ಅಗತ್ಯವಿದೆ. ಈ ನಿವೇಶನ ದೊರೆತರೆ ಮಾದರಿ ಕಾಲೇಜು ನಿರ್ಮಾಣವಾಗಲಿದೆ’ ಎಂದರು.

ಬಿಡಿಎ ಆಯುಕ್ತ ಎನ್. ಜಯರಾಂ
‘ಶಾಸಕ ಡಿಸಿಎಂ ಸೂಚನೆಗೂ ಮನ್ನಣೆ ಇಲ್ಲ’
‘ಕೆಂಗೇರಿ ಪ್ರಥಮ ದರ್ಜೆ ಕಾಲೇಜಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಸ್ಥಳೀಯ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಅವರು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆದರೆ ಬಿಡಿಎ ಅಧಿಕಾರಿಗಳು ಮುಂದುವರಿಯುತ್ತಿಲ್ಲ’ ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಅಧ್ಯಕ್ಷ ಶಿವಕುಮಾರ್‌ ದೂರಿದರು. ‘ಖಾಸಗಿ ಒತ್ತಡಕ್ಕೆ ಮಣಿದಿರುವ ಬಿಡಿಎ ಅಧಿಕಾರಿಗಳು ಸರ್ಕಾರಿ ಕಾಲೇಜಿಗೆ ಮೀಸಲಿಟ್ಟಿರುವ ನಿವೇಶನವನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ. ಕಾಲೇಜಿಗೆ ನಿವೇಶನವನ್ನು ಶೀಘ್ರವಾಗಿ ಹಂಚಿಕೆ ಮಾಡದಿದ್ದರೆ ಹೋರಾಟ ಆರಂಭಿಸುತ್ತೇವೆ’ ಎಂದು ತಿಳಿಸಿದರು.
ಅಧ್ಯಕ್ಷರ ಸಮ್ಮತಿ ಬಾಕಿ: ಆಯುಕ್ತ
‘ಸರ್ಕಾರದ ಇಲಾಖೆಗಳಿಗೆ ಸಿಎ ನಿವೇಶನ ಹಂಚಿಕೆ ಮಾಡಬೇಕಾದರೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಆಯುಕ್ತರು ಮಂಜೂರು ಮಾಡಬೇಕು. ಕೆಂಗೇರಿ ಕಾಲೇಜಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಗೆ ನಾನು ಅನುಮೋದನೆ ನೀಡಿದ್ದೇನೆ. ಅಧ್ಯಕ್ಷರ ಸಮ್ಮತಿ ಬಾಕಿ ಇದ್ದು, ಕೆಲವೇ ದಿನಗಳಲ್ಲಿ ಅವರು ಒಪ್ಪಿಗೆ ನೀಡಬಹುದು’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಂ ಅವರು ‍‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.