ಬೆಂಗಳೂರು: ನಿಗಮ, ಮಂಡಳಿಗಳಿಗೆ ನಾಮನಿರ್ದೇಶನ ಮಾಡುವಾಗ ರಾಜ್ಯ ಸರ್ಕಾರವು ನೇಕಾರ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಲ್.ಆರ್. ಅನಂತ್ ಬೇಸರ ವ್ಯಕ್ತಪಡಿಸಿದ್ದಾರೆ.
‘ರಾಜ್ಯದಲ್ಲಿ ದೇವಾಂಗ, ಪದ್ಮಸಾಲಿ, ಕುರುಹಿನ ಶೆಟ್ಟಿ, ಪಟ್ಟೇಗಾರ್ ಹೀಗೆ ನಾನಾ ಹೆಸರುಗಳಲ್ಲಿ ನೇಕಾರ ಸಮುದಾಯವಿದ್ದು, 75 ಲಕ್ಷ ಜನಸಂಖ್ಯೆ ಹೊಂದಿದೆ. ಇದು ಕುರುಬ ಸಮುದಾಯಕ್ಕಿಂತ ಅಧಿಕವಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೇಕಾರರ ಸಮುದಾಯದ ಒಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಆದರೂ, ಉತ್ತರ ಕರ್ನಾಟಕ ಭಾಗದಲ್ಲಿ 37 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ನೇಕಾರರು ಕಾರಣರಾಗಿದ್ದಾರೆ’ ಎಂದಿದ್ದಾರೆ.
ಬೆಳಗಾವಿ ಮತ್ತು ವಿಜಯಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಇಲ್ಲದೇ ಹೋದರೆ ಅದರ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನೇಕಾರರ ಬೇಡಿಕೆಯನ್ನು ಪರಿಗಣಿಸುವಂತೆ ಎಐಸಿಸಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಮನವಿ ಮಾಡಲಾಗಿದೆ ಎಂದು ರಾಷ್ಟ್ರೀಯ ನೇಕಾರರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಎಲ್.ಆರ್. ಅನಂತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.