ADVERTISEMENT

ನೆಲಗದರನಹಳ್ಳಿ, ಶಿವಪುರ ಕೆರೆಗೆ ಕಾಯಕಲ್ಪ: 6 ತಿಂಗಳಲ್ಲಿ ಪುನರುಜ್ಜೀವನ

₹6 ಕೋಟಿ ವೆಚ್ಚದಲ್ಲಿ ಕಾಮಗಾರಿ: 6 ತಿಂಗಳಲ್ಲಿ ಪುನರುಜ್ಜೀವನ

ವಿಜಯಕುಮಾರ್ ಎಸ್.ಕೆ.
Published 23 ಜನವರಿ 2023, 20:23 IST
Last Updated 23 ಜನವರಿ 2023, 20:23 IST
   

ಬೆಂಗಳೂರು: ಕೈಗಾರಿಕೆ ತ್ಯಾಜ್ಯ ತುಂಬಿಕೊಂಡಿದ್ದ ನೆಲಗದರನಹಳ್ಳಿ ಮತ್ತು ಶಿವಪುರ ಕೆರೆಗಳ ಪುನರುಜ್ಜೀವನಕ್ಕೆ ಈಗ ಕಾಲ ಕೂಡಿಬಂದಿದೆ. ಎರಡೂ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಬಿಬಿಎಂಪಿ ಆರಂಭಿಸಿದೆ.

ನೆಲಗದರನಹಳ್ಳಿ ಸುತ್ತಮುತ್ತಲ ಈ ಜಲಕಾಯಗಳು ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದವು. ನಗರ ಬೆಳೆದಂತೆ ಕೆರೆಗಳು ಕಲುಷಿತಗೊಂಡವು. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಈ ಕೆರೆಗಳಿಗೆ ಕೈಗಾರಿಕೆಗಳ ತ್ಯಾಜ್ಯವೂ ಹರಿದು ಇನ್ನಷ್ಟು ಹಾಳಾಗಿದ್ದವು.

ಅದರ ಜತೆಗೆ ಒಳಚರಂಡಿ ನೀರು ಕೂಡ ಕೆರೆಗಳನ್ನು ಸೇರಿ ಕೆರೆಗಳ ಸ್ವರೂಪವೇ ಬದಲಾಗಿತ್ತು. ವಿಷಕಾರಿಯಾಗಿದ್ದ ನೀರು ಕುಡಿದರೆ ದನಕರುಗಳು ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಕೆರೆಯಲ್ಲಿದ್ದ ಜಲಚರಗಳ ಅಸ್ತಿತ್ವಕ್ಕೂ ಧಕ್ಕೆ ಉಂಟಾಗಿತ್ತು. ಇವುಗಳ ಪುನರುಜ್ಜೀವನಕ್ಕೆ ಸ್ಥಳೀಯರು ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಇದ್ದರು.

ADVERTISEMENT

ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಕೆರೆಗಳ ಅಭಿವೃದ್ಧಿ ಅನುದಾನ ತರುವಲ್ಲಿ ಶಾಸಕ ಆರ್.ಮಂಜುನಾಥ್ ಯಶಸ್ವಿಯಾಗಿದ್ದರು. ಸರ್ಕಾರ ಬದಲಾದ ಬಳಿಕ ಅನುದಾನ ವಾಪಸ್ ಪಡೆದಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಕಡೆಗೂ ಅಮೃತ ನಗರೋತ್ಥಾನ ಅನುದಾನ ಪಡೆದು ಕೆರೆಗಳ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ.

₹4 ಕೋಟಿ ವೆಚ್ಚದಲ್ಲಿ ನೆಲಗದರನಹಳ್ಳಿ ಕೆರೆ ಪುನರುಜ್ಜೀವನ ಮತ್ತು ₹2 ಕೋಟಿ ವೆಚ್ಚದಲ್ಲಿ ಶಿವಪುರ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಎರಡೂ ಕೆರೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯುವ ಕೆಲಸ ಈಗ ಆರಂಭವಾಗಿದೆ. ಕೆರೆಗಳಿಗೆ ಹರಿದುಬರುವ ಕಲುಷಿತ ನೀರು ಬೇರೆಡೆಗೆ ವರ್ಗಾಯಿಸುವ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಕೈಗಾರಿಕೆ ತ್ಯಾಜ್ಯ ಜಲಕಾಯ ಸೇರದಂತೆ ತಡೆಯುವ ಕಾಮಗಾರಿಯೂ ಪ್ರಗತಿಯಲ್ಲಿದೆ. ‘ಈ ಎಲ್ಲಾ ಕಾಮಗಾರಿಗಳು ಎಲ್ಲಾ ಕಾಮಗಾರಿಗಳು ಪೂರ್ಣಗೊಂಡರೆ, ನೆಲಗದರನಹಳ್ಳಿ ಮತ್ತು ಶಿವಪುರ ಕೆರೆಗಳಿಗೆ ಮತ್ತೆ ವೈಭವದ ದಿನಗಳು ಬರಲಿವೆ’ ಎನ್ನುತ್ತಾರೆ ಸ್ಥಳೀಯರು.

‘ನಮ್ಮ ಜೀವನಾಡಿಯಾಗಿದ್ದ ಈ ಕೆರೆಗಳು ಇತ್ತಿಚಿನ ವರ್ಷಗಳಲ್ಲಿ ಸಂಪೂರ್ಣ ಹಾಳಾಗಿ ಮಲದ ಗುಂಡಿಯಾಗಿ ಮಾರ್ಪಟ್ಟಿದ್ದವು. ಕೆರೆಯ ಬಳಿ ಮೂಗು ಮುಚ್ಚಿ ಓಡಾಡಬೇಕಾದ ಸ್ಥಿತಿ ಇತ್ತು. ಈ ಕೆರೆಗಳಿಗೆ ಅಭಿವೃದ್ಧಿಗೆ ಹಿಡಿದಿದ್ದ ಗ್ರಹಣ ಈಗ ಬಿಟ್ಟಂತಾಗಿದೆ. ಕಾಮಗಾರಿ ಆರಂಭವಾಗಿರುದುದು ಸಂತಸ ತಂದಿದೆ. ಆದಷ್ಟು ಬೇಗ ಕಾಮಗಾರಿಯನ್ನು ಅಧಿಕಾರಿಗಳು ಪೂರ್ಣಗೊಳಿಸಬೇಕು’ ಎಂಬುದು ಸ್ಥಳೀಯರ ಒತ್ತಾಯ.

ಆರು ತಿಂಗಳಲ್ಲಿ ಅಭಿವೃದ್ಧಿ

ಎರಡೂ ಕೆರೆಗಳ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ವೆಂಕಟೇಶ್ ತಿಳಿಸಿದರು.

ಸದ್ಯ ಹೂಳೆತ್ತುವ ಕಾಮಗಾರಿ ಆರಂಭವಾಗಿದೆ.‌ ಸುತ್ತಲೂ ನಡಿಗೆ ಪಥ ಮತ್ತು ತಂತಿಬೇಲಿ ನಿರ್ಮಿಸಲಾಗುವುದು. ಶೌಚ ನೀರು ಕೆರೆ ಸೇರದಂತೆ ತಡೆಯಲು ಪೈಪ್‌ಲೈನ್ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.

ನೆಲಗದರನಹಳ್ಳಿ ಕೆರೆ ಅಭಿವೃದ್ಧಿಗೆ ₹4 ಕೋಟಿ ಮತ್ತು ಶಿವಪುರ ಕೆರೆ ಪುನರುಜ್ಜೀವನಕ್ಕೆ ₹2 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.


ಅನುದಾನಕ್ಕೆ ಹೈಕೋರ್ಟ್‌ ಮೊರೆಹೋಗಬೇಕಾಯಿತು

ಈ ಕೆರೆಗಳ ಅಭಿವೃದ್ಧಿಗೆ ಹೈಕೋರ್ಟ್‌ಗೆ ಹೋಗಿ ಅನುದಾನ ತರಬೇಕಾಯಿತು ಎಂದು ಶಾಸಕ ಆರ್‌.ಮಂಜುನಾಥ್ ಹೇಳಿದರು.

ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಹಲವು ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಚಿಕ್ಕಬಾಣಾವರ ಕೆರೆ ಅಭಿವೃದ್ಧಿಗೆ ₹30 ಕೋಟಿ, ಅಬ್ಬಿಗೆರೆ ಕೆಗೆ ₹10 ಕೋಟಿ,
ಸೋಮಶೆಟ್ಟಿಹಳ್ಳಿ ಕೆರೆಗೆ ₹13 ಕೋಟಿ, ಶಿವಪುರ ಕೆರೆಗೆ ₹10 ಕೋಟಿ, ಚೊಕ್ಕಸಂದ್ರ, ಬಾಗಲಗುಂಟೆ, ಬಸಪ್ಪನಕಟ್ಟೆ, ಪಿಳ್ಳಪ್ಪನಕಟ್ಟೆ ಕೆರೆಗಳಿಗೆ ತಲಾ ₹5 ಕೋಟಿ ಅನುದಾನ ನಿಗದಿಯಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಎಲ್ಲಾ ಅನುದಾನ ತಡೆ ಹಿಡಿಯಲಾಯಿತು. ಕೊನೆಗೆ ಹೈಕೋರ್ಟ್‌ ಮೆಟ್ಟಿಲೇರಿ ಅನುದಾನ ಪಡೆದು ಈಗ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.‌

ಈ ಎರಡು ಕೆರೆಗಳ ಜತೆಗೆ ಅಬ್ಬಿಗೆರೆ ಕೆರೆಯನ್ನೂ ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಎರಡೂ ಕೆರೆಯ ಕಾಮಗಾರಿಗಳ ವಿವರ

l ಕೆರೆಗಳಲ್ಲಿ ತುಂಬಿರುವ ಹೂಳೆತ್ತಿ ಸ್ವಚ್ಛಗೊಳಿಸುವುದು.

l ಕೆರೆಗಳಿಗೆ ಶೌಚ ನೀರು ಸೇರದಂತೆ ಪ್ರತ್ಯೇಕ ಪೈಪ್‌ಲೈನ್ ವ್ಯವಸ್ಥೆ.

l ಸುತ್ತಲೂ ನಡಿಗೆ ಪಥ ನಿರ್ಮಾಣ.

l ತಂತಿಬೇಲಿ ನಿರ್ಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.