ADVERTISEMENT

ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ರದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂವಿಧಾನಕ್ಕೆ ಪೂರಕವಾದ ಶಿಕ್ಷಣ ನೀತಿ ಜಾರಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 0:30 IST
Last Updated 15 ಆಗಸ್ಟ್ 2023, 0:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದುಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ.‌ರೆಹಮಾನ್ ಖಾನ್, ‘ಆರ್‌ಎಸ್‌ಎಸ್ ಕಾರ್ಯಸೂಚಿಯ ಭಾಗವಾಗಿರುವ ಎನ್ಇಪಿಯನ್ನು ರಾಜ್ಯದಲ್ಲಿ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ‌ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಎನ್‌ಇಪಿ ಕೈಬಿಡಲು ಕೆಲವು ಸಿದ್ಧತೆ ಅಗತ್ಯ. ಚುನಾವಣೆ ವರ್ಷವಾಗಿದ್ದರಿಂದ ಈ ಬಾರಿ ಸಮಯ ಇರಲಿಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ತಡ ಆಯಿತು. ಮುಂದಿನ ವರ್ಷದಿಂದ ಎನ್ಇಪಿಯನ್ನು ಪೂರ್ಣವಾಗಿ ರದ್ದು ಮಾಡುತ್ತೇವೆ. ಸಂವಿಧಾನಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತೇವೆ' ಎಂದರು.

ADVERTISEMENT

‘ಎನ್ಇಪಿಗೆ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಎಲ್ಲರ ವಿರೋಧವಿದೆ. ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕದಲ್ಲಿ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲಾಯಿತು. ಆ ಮೂಲಕ ಬಿಜೆಪಿಯು ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ’ ಎಂದು ಹೇಳಿದರು.

‘ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲೇ ಎನ್ಇಪಿ ಕರಡು ತಯಾರಾಗಿತ್ತು. ಬಹಳ ಹಿಂದೆಯೇ ಅದು ಸೋರಿಕೆಯಾಗಿತ್ತು.‌ ರಾಜ್ಯಸಭೆಯಲ್ಲೇ ಈ ಬಗ್ಗೆ ನಾನು ಪ್ರಶ್ನೆ ಎತ್ತಿದ್ದೆ. ಆರ್‌ಎಸ್‌ಎಸ್‌ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಎನ್ಇಪಿಯನ್ನು ಬಳಸಿಕೊಳ್ಳುತ್ತಿದೆ. ಅದನ್ನು ತಕ್ಷಣ ರದ್ದು ಮಾಡಬೇಕು’ ಎಂದು ರೆಹಮಾನ್ ಖಾನ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.