ಬೆಂಗಳೂರು: ಡಚ್ ಯೂಟ್ಯೂಬರ್ ಮ್ಯಾಡ್ಲಿ ರೋವರ್ ಮೇಲೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮುಸ್ಲಿಂ ವ್ಯಾಪಾರಿಯಿಂದ ಆದ ಹಲ್ಲೆ ಸಾಮಾಜಿ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
'ಒಂದೇ ವಿಡಿಯೊದಲ್ಲಿ ಎರಡು ಭಾರತಗಳ ದರ್ಶನ' ಎಂದು ಹಲವರು ಈ ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ.
ಬಹುತೇಕ ವಿಡಿಯೊಗಳಲ್ಲಿ ಮುಸ್ಲಿಂ ವ್ಯಾಪಾರಿ, ಡಚ್ ಪ್ರಜೆ ಮೇಲೆ ಹಲ್ಲೆ ಮಾಡುತ್ತಿರುವ ಒಂದು ದೃಶ್ಯ ಹಾಗೂ ಇನ್ನೊಂದು ದೃಶ್ಯದಲ್ಲಿ ಅದೇ ಡಚ್ ಪ್ರಜೆಗೆ ಅದೇ ಸ್ಥಳದಲ್ಲಿ ಸೌಜನ್ಯದಿಂದ ಮಾತನಾಡಿಸಿ ದಾರಿ ತೋರಿಸುತ್ತಿರುವ ಮೂವರು ಹಿಂದೂಗಳನ್ನು (ಸೋಶಿಯಲ್ ಮೀಡಿಯಾದ ಕೆಲವು ವಿಡಿಯೊಗಳಲ್ಲಿ ಹೇಳಿರುವಂತೆ). ತೋರಿಸಲಾಗಿದೆ.
ಪೂರ್ಣ ವಿಡಿಯೊವನ್ನು ಯುಟ್ಯೂಬ್ ನಲ್ಲಿ ಮ್ಯಾಡ್ಲಿ ರೋವರ್ ಹಂಚಿಕೊಂಡಿದ್ದು ಇಂಡಿಯಾದ ಕಳ್ಳರ ಮಾರುಕಟ್ಟೆಯಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ ಎಂದಷ್ಟೇ ಅವರು 18.14 ನಿಮಿಷದ ವಿಡಿಯೊ ಹಂಚಿಕೊಂಡಿದ್ದಾರೆ.
ಇದೇ ವಿಡಿಯೊದಲ್ಲಿ ಮುಸ್ಲಿಂ ವ್ಯಾಪಾರಿಯಿಂದಾದ ಹಲ್ಲೆ ಹಾಗೂ ಹಿಂದೂಗಳೆಂದು ಹೇಳಲಾದ ವ್ಯಕ್ತಿಗಳು ದಾರಿ ತೋರಿಸುತ್ತಿರುವ ದೃಶ್ಯಗಳನ್ನು ಎಡಿಟ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಲಾಗುತ್ತಿದೆ.
ಇನ್ನೂ ಹಲವರು ಈ ವಿಡಿಯೊ ಹಂಚಿಕೊಂಡು ಬೆಂಗಳೂರು ಪೊಲೀಸರು ಮ್ಯಾಡ್ಲಿ ರೋವರ್‌ಗೆ ಸೂಕ್ತ ರಕ್ಷಣೆ ನೀಡಿ, ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ. ಆ ಮೂಲಕ ವಿದೇಶಿ ಪ್ರಜೆಗಳಿಗೆ ಭದ್ರತೆ ಭಾವ ಮೂಡಿಸಿ ಎಂದು ಹೇಳಿದ್ದಾರೆ.
ಹಲ್ಲೆ ಆರೋಪದಡಿ ಬಟ್ಟೆ ವ್ಯಾಪಾರಿ ನವಾಬ್‌ನನ್ನು (58) ಕಾಟನ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಆರೋಪಿ ನವಾಬ್, ಹಳೇ ಗುಡ್ಡದಹಳ್ಳಿ ನಿವಾಸಿ. ವೃತ್ತಿಯಲ್ಲಿ ಆಟೊ ಚಾಲಕ. ಪ್ರತಿ ಭಾನುವಾರ ಚಿಕ್ಕಪೇಟೆಯ ಮಾರುಕಟ್ಟೆಯಲ್ಲಿ ಹಳೇ ಬಟ್ಟೆ ಮಾರಾಟ ಮಾಡುತ್ತಿದ್ದ. ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ವಿಡಿಯೊಗೆ ಪ್ರತಿಕ್ರಿಯಿಸಿರುವ ಜನ, ‘ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಕದ್ದ ವಸ್ತುಗಳನ್ನು ತಂದು ಚಿಕ್ಕಪೇಟೆಯ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಹೀಗಾಗಿ, ಇಲ್ಲಿ ವಿಡಿಯೊ ಮಾಡಿದ್ದಕ್ಕೆ ಆರೋಪಿ ಹಲ್ಲೆ ಮಾಡಿದ್ದಾನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.