ಬೆಂಗಳೂರು: ರಾಜಭವನ ರಸ್ತೆ, ವಿಧಾನಸೌಧದ ಆಸುಪಾಸು, ಪ್ರದೇಶ... ಹೀಗೆ ಎಲ್ಲೆಂದರಲ್ಲಿ ಇನ್ನು ಜಾಹೀರಾತುಗಳನ್ನು ಅಳವಡಿಸಬಹುದೆ?
ಬಿಬಿಎಂಪಿ 2018ರಲ್ಲಿ ರೂಪಿಸಿದ್ದ ಜಾಹೀರಾತು ಬೈಲಾವನ್ನು ಬದಿಗಿಟ್ಟು ನಗರಾಭಿವೃದ್ಧಿ ಇಲಾಖೆ ರೂಪಿಸಿರುವ, ‘ಬಿಬಿಎಂಪಿ ಜಾಹೀರಾತು
ನಿಯಮಗಳು 2019’ರ ಕರಡಿನಲ್ಲಿರುವ ಅಂಶಗಳು ಇಂತಹದ್ದೊಂದು ಜಿಜ್ಞಾಸೆಯನ್ನು ಹುಟ್ಟುಹಾಕಿವೆ.
2006ರ ಸೆ. 29ರಂದು ಬಿಬಿಎಂಪಿ ಅಧಿಸೂಚನೆ ಹೊರಡಿಸಿದ್ದ, 2007ರ ಜನವರಿಯಿಂದ ಜಾರಿಗೆ ಬಂದಿದ್ದ ಜಾಹೀರಾತು ಬೈಲಾಗಳ ಪ್ರಕಾರ ನಗರವನ್ನು ಎ, ಬಿ, ಸಿ ಮತ್ತು ಡಿ ವಲಯಗಳನ್ನಾಗಿ ವಿಂಗಡಿಸಲಾ
ಗಿತ್ತು. ಎ–ವಲಯದಲ್ಲಿ ಕುಮಾರಕೃಪಾ ರಸ್ತೆ, ರಾಜಭವನ ರಸ್ತೆ, ಅಂಬೇಡ್ಕರ್ ಬೀದಿ, ಅಂಚೆ ಕಚೇರಿ ರಸ್ತೆ, ಬಸವೇಶ್ವರ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್.ವೃತ್ತ, ಕಬ್ಬನ್‌ಪಾರ್ಕ್ ಮತ್ತು ಲಾಲ್‌ಬಾಗ್, ನೃಪತುಂಗ ರಸ್ತೆ, ಅರಮನೆ ರಸ್ತೆಗಳನ್ನು ಪಟ್ಟಿ ಮಾಡಲಾಗಿತ್ತು. ಇಲ್ಲಿ ಜಾಹೀರಾತು ಪ್ರದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. 2018ರಲ್ಲಿ ಬಿಬಿಎಂಪಿ ರೂಪಿಸಿದ್ದ ಜಾಹೀರಾತು ಬೈಲಾದಲ್ಲೂ ಈ ನಿಷೇಧವನ್ನು ಮುಂದುವರಿಸಲಾಗಿತ್ತು.
ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ‘ಬಿಬಿಎಂಪಿ ಜಾಹೀರಾತು ನಿಯಮ 2019’ರಲ್ಲಿ ಇಂತಹ ಯಾವುದೇ ವಲಯಗಳ ಬಗ್ಗೆ ಉಲ್ಲೇಖವೇಇಲ್ಲ. ಎ ವಲಯದಲ್ಲಿ ಇನ್ನು ಜಾಹೀರಾತು ಪ್ರದರ್ಶನಕ್ಕೆನಿಷೇಧ ಮುಂದುವರಿಯುತ್ತದೆಯೋ ಅಥವಾ ಅವಕಾಶ ಕಲ್ಪಿಸಲಾಗುತ್ತದೋ ಇಲ್ಲವೋ ಎಂಬ ಬಗ್ಗೆ ಗೊಂದಲ ಮೂಡಿದೆ.
ಸರ್ಕಾರವು 2006ರ ಜಾಹೀರಾತು ಬೈಲಾ ಹಾಗೂ ಇತರ ಬೈಲಾಗಳು ಸಾಕಷ್ಟು ಶಕ್ತಿಶಾಲಿಯಾಗಿಲ್ಲ ಎಂಬ ಕಾರಣ ನೀಡಿ, 1976ರ ಕೆಎಂಸಿ ಕಾಯ್ದೆಯ ಸೆಕ್ಷನ್ 427ರಲ್ಲಿನ ಅಧಿಕಾರ ಬಳಸಿ ಹೊಸತಾಗಿ ಜಾಹೀರಾತು ನಿಯಮಗಳನ್ನು ರೂಪಿಸಿದೆ. ಆದರೆ, ವಿಪರ್ಯಾಸವೆಂದರೆ ಈಗಿನ ಹೊಸ ನಿಯಮಗಳ ಕರಡು 2006ರ ಬೈಲಾದಷ್ಟೂ ಶಕ್ತಿಶಾಲಿಯಾಗಿಲ್ಲ. ಹೊಸ ನಿಯಮಗಳು ಜಾರಿಗೆ ಬಂದಿದ್ದೇ ಆದರೆ 2006ರ ಹಾಗೂ 2018ರ ಜಾಹೀರಾತು ಬೈಲಾಗಳು ಅನೂರ್ಜಿತಗೊಳ್ಳಲಿವೆ.
‘2018ರಲ್ಲಿ ಬಿಬಿಎಂಪಿ ರೂಪಿಸಿದ್ದ ಜಾಹೀರಾತು ಬೈಲಾ ಹೆಚ್ಚು ನಿಖರತೆಯಿಂದ ಕೂಡಿತ್ತು. ಹೊಸ ನಿಯಮಗಳು ಅನೇಕ ಗೊಂದಲಗಳಿಂದ ಕೂಡಿವೆ’ ಎಂದು ಹೆಸರು ಬಹಿರಂಗಪಡಿಲು ಬಯಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.