ADVERTISEMENT

ವಿಧಾನಸಭೆ ಪಶ್ಚಿಮ ದ್ವಾರಕ್ಕೆ ಹೊಸ ಬಾಗಿಲು

ಮೊಗಸಾಲೆಯಲ್ಲೂ ನವೀಕರಣ ಕಾಮಗಾರಿ: ಸದನದೊಳಗೆ ಆಕರ್ಷಕ ಗಡಿಯಾರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:52 IST
Last Updated 15 ಜುಲೈ 2024, 15:52 IST
<div class="paragraphs"><p>ವಿಧಾನಸಭೆ</p></div>

ವಿಧಾನಸಭೆ

   

ಬೆಂಗಳೂರು: ಶಾಸಕರು, ಸಚಿವರು ವಿಧಾನಸಭೆ ಪ್ರವೇಶಿಸಲು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಪಶ್ಚಿಮ ದ್ವಾರಕ್ಕೆ ಕುಸುರಿ ಕೆತ್ತನೆಯುಳ್ಳ ಅತ್ಯಾಕರ್ಷಕ ಬೀಟೆ ಬಾಗಿಲು ಅಳವಡಿಸಲಾಗಿದೆ. ಇದರೊಂದಿಗೆ ವಿಧಾನಸಭೆಯ ಪಶ್ಚಿಮ ದ್ವಾರದ ಸೌಂದರ್ಯ ಇಮ್ಮಡಿಯಾಗಿದೆ.

ಈ ಮೊದಲು ಪಶ್ಚಿಮ ದ್ವಾರದಲ್ಲಿ ಕಬ್ಬಿಣದ ಗೇಟ್‌ ಮಾದರಿಯ ಬಾಗಿಲು ಇತ್ತು. ಅದನ್ನು ತೆರವುಗೊಳಿಸಿ ಬೀಟೆ ಮರದಿಂದ ರೂಪಿಸಿದ ಬಾಗಿಲು ಅಳವಡಿಸಲಾಗಿದೆ. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಪ್ರವೇಶ ದ್ವಾರವನ್ನು ಸೋಮವಾರ ಉದ್ಘಾಟಿಸಿದರು.

ADVERTISEMENT

₹20 ಲಕ್ಷ ವೆಚ್ಚ: ಬೀಟೆ ಮರದಿಂದ ತಯಾರಿಸಿರುವ ಬಾಗಿಲನ್ನು ಲೋಕೋಪಯೋಗಿ ಇಲಾಖೆಯು ಅರಣ್ಯ ಇಲಾಖೆಯಿಂದ ಖರೀದಿಸಿದೆ. ಮರ ಪೂರೈಕೆ, ಕೆತ್ತನೆ ಕೆಲಸ ಎಲ್ಲವನ್ನೂ ಅರಣ್ಯ ಇಲಾಖೆಯ ವತಿಯಿಂದಲೇ ನಿರ್ವಹಿಸಲಾಗಿದೆ.

‘₹20 ಲಕ್ಷ ಪಾವತಿಸಿ ಅರಣ್ಯ ಇಲಾಖೆಯಿಂದ ಬಾಗಿಲನ್ನು ಖರೀದಿಸಲಾಗಿದೆ. ಕೆತ್ತನೆ ಕೆಲಸಗಾರರನ್ನು ಆಯ್ಕೆಮಾಡಿ, ಬಾಗಿಲು ನಿರ್ಮಿಸುವ ಕೆಲಸವನ್ನು ಅರಣ್ಯ ಇಲಾಖೆಯೇ ಮಾಡಿದೆ’ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.

ಪಶ್ಚಿಮ ದ್ವಾರದಿಂದ ಆಡಳಿತ ಪಕ್ಷದ ಮೊಗಸಾಲೆ ಮತ್ತು ವಿರೋಧ ಪಕ್ಷದ ಮೊಗಸಾಲೆ ಸಂಪರ್ಕಿಸುವ ಮಾರ್ಗದಲ್ಲಿ ಹೊಸ ನೆಲಹಾಸು ಅಳವಡಿಸಲಾಗಿದೆ. ಅಲ್ಲಿ ತೆರೆದ ಒಳಾಂಗಣ ಇತ್ತು. ₹12.5 ಲಕ್ಷ ವೆಚ್ಚದಲ್ಲಿ ಅದಕ್ಕೆ ಗಾಜಿನ ಹೊದಿಕೆಯನ್ನು ಅಳವಡಿಸಿ ಮುಚ್ಚಲಾಗಿದೆ.

ಗಂಡಭೇರುಂಡದಲ್ಲಿ ಗಡಿಯಾರ: ವಿಧಾನಸಭೆಯೊಳಗೆ ಹೊಸ ಗಡಿಯಾರಗಳನ್ನು ಅಳವಡಿಸಲಾಗಿದೆ. ಬೀಟೆ ಮರದಲ್ಲಿ ಗಂಡಭೇರುಂಡ ಲಾಂಛನವನ್ನು ಕೆತ್ತಿ, ಅದರೊಳಗೆ ಗಡಿಯಾರ ಇರಿಸಲಾಗಿದೆ.

ವಿಧಾನಸಭೆಯ ಮೊಗಸಾಲೆ ಮತ್ತು ಒಳಾಂಗಣದಲ್ಲಿ ಬೀಡಿಂಗ್‌ಗಳಿಗೆ ಚಿನ್ನದ ಬಣ್ಣ ಲೇಪನ ಮಾಡಲಾಗಿದೆ. ಶಾಸಕರ ಆಸನಗಳ ಬೀಡಿಂಗ್‌ಗಳಿಗೂ ಚಿನ್ನದ ಬಣ್ಣ ಲೇಪಿಸಲಾಗಿದೆ.

ನವೀಕರಣ ಕಾಮಗಾರಿ ಕೈಗೊಂಡಿರುವ ಸಭಾಧ್ಯಕ್ಷರ ಕ್ರಮವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನವೀಕರಣ ಕಾಮಗಾರಿಯ ಮೂಲಕ ವಿಧಾನಸೌಧದ ಸೌಂದರ್ಯ ಹೆಚ್ಚುವಂತೆ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ಹಲವರು ಮುಖ್ಯಮಂತ್ರಿಯವರ ಮಾತಿಗೆ ದನಿಗೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.