ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ‘ಪೇಯಿಂಗ್ ಗೆಸ್ಟ್’ (ಪಿಜಿ) ಉದ್ಯಮಕ್ಕೆ ಪರವಾನಗಿ ನೀಡುವ ಹೊಸ ಮಾರ್ಗಸೂಚಿಯನ್ನು ಬಿಬಿಎಂಪಿ ಪ್ರಕಟಿಸಿದ್ದು, ಆರು ತಿಂಗಳಿಗೊಮ್ಮೆ ಪರಿಶೀಲಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಿದೆ.
ಬಿಬಿಎಂಪಿ ಕಾಯ್ದೆ–2020ರ ಸೆಕ್ಷನ್ 305ರ ಪ್ರಕಾರ, ಪಿಜಿಗಳಿಗೆ ಉದ್ದಿಮೆ ಪರವಾನಗಿ ನೀಡುವಾಗ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಹೊರಡಿಸಿದ್ದಾರೆ. ಈಗಾಗಲೇ ಉದ್ದಿಮೆ ಪರವಾನಗಿ ಪಡೆದಿರುವ ಪಿಜಿಗಳೂ ನವೀಕರಣ ಸಂದರ್ಭದಲ್ಲಿ ಈ ಮಾರ್ಗಸೂಚಿಗಳನ್ನು ಪಾಲಿಸಿರಬೇಕು ಎಂದು ಸೂಚಿಸಲಾಗಿದೆ.
ವಲಯ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿ ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಪಿಜಿಗಳಿಗೆ ಆರು ತಿಂಗಳಿಗೊಮ್ಮೆ ಭೇಟಿನೀಡಿ ಮಾರ್ಗಸೂಚಿಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು.
ಮಾರ್ಗಸೂಚಿಗಳು ಉಲ್ಲಂಘನೆಯಾಗಿದ್ದರೆ, ವಲಯ ಆಯುಕ್ತರು, ಪಿಜಿ ಉದ್ದಿಮೆದಾರರ ವಿರುದ್ಧ ಬಿಬಿಎಂಪಿ-2020ರ ಕಾಯ್ದೆ ಸೆಕ್ಷನ್ 307 ಮತ್ತು 308ರಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ಮಾರ್ಗಸೂಚಿಗಳು ಇಂತಿವೆ:
* ಪಿಜಿಗಳ ಎಲ್ಲ ಪ್ರವೇಶ/ ನಿರ್ಗಮನ ದ್ವಾರ ಮತ್ತು ಆವರಣದ ಸುತ್ತಮುತ್ತ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು. 90 ದಿನಗಳವರೆಗೆ ಬ್ಯಾಕ್‌ಅಪ್ ಹೊಂದಿರಬೇಕು.
* ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪಿಜಿಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ 70 ಚದರ ಅಡಿ ಕನಿಷ್ಠ ಜಾಗವಿರಬೇಕು. ಕಟ್ಟಡದಲ್ಲಿ ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿ ನೀಡಬೇಕು.
* ಪಿಜಿಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೌಲಭ್ಯವಿರಬೇಕು.
* ಪಿಜಿಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರಬೇಕು. ಪ್ರತಿಯೊಬ್ಬ నిವಾಸಿಗೆ ಪ್ರತಿ ದಿನ 135 ಲೀಟರ್ ನೀರಿನ ಲಭ್ಯತೆ ಇರುವುದನ್ನು ಮಾಲೀಕರು/ ಉದ್ದಿಮೆದಾರರು ಖಾತರಿಪಡಿಸಬೇಕು.
* ಪಿಜಿಗಳಲ್ಲಿ ಉದ್ದಿಮೆದಾರರು ತಮ್ಮದೇ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ ಮೂರು ತಿಂಗಳೊಳಗೆ ಕಡ್ಡಾಯವಾಗಿ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪಡೆದುಕೊಳ್ಳಬೇಕು.
* ಪಿಜಿ ನಿವಾಸಿಗಳ ಸುರಕ್ಷತೆಗೆ ಕನಿಷ್ಠ ಒಬ್ಬ ಸಿಬ್ಬಂದಿಯನ್ನು 24 ಗಂಟೆಯೂ ನಿಯೋಜಿಸಿರಬೇಕು.
* ಪಿಜಿಗಳು ವಾಣಿಜ್ಯ ಪರವಾನಗಿ ಪತ್ರ ಪಡೆಯುವಾಗ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದ ಅಧಿಕೃತ ಪ್ರಮಾಣ ಪತ್ರ ಸಲ್ಲಿಸಬೇಕು
* ಪಿಜಿ ಕಟ್ಟಡದಲ್ಲಿ ಬಿಬಿಎಂಪಿ ಸಹಾಯವಾಣಿ- 1533, ಪೊಲೀಸ್ ಇಲಾಖೆಯ ಸಹಾಯವಾಣಿ 101 ಫಲಕವನ್ನು ಪ್ರದರ್ಶಿಸಿರಬೇಕು.
* ಪಿಜಿಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಆಳವಡಿಸಿರಬೇಕು.
* ಪಿಜಿಗಳ ಮಾಲೀಕರು ಘನತ್ಯಾಜ್ಯ ವಿಂಗಡಿಸಿ, ವಿಲೇವಾರಿಗೊಳಸಲು ಕ್ರಮ ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.