ಬೆಂಗಳೂರು: ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜು ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ‘ಸರ್ಗಮ್’ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ರಂಜಿಸಿದರು.
‘ರಾಮಲೀಲಾ’ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದ ಈ ಉತ್ಸವ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿತು. 304 ಕಾಲೇಜುಗಳ ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸಿದ್ದರು. ಶ್ರೀರಾಮನ ಶಕ್ತಿ ಮತ್ತು ಪ್ರತಿಭೆಯನ್ನು ನೃತ್ಯ ಮತ್ತು ವಿವಿಧ ಕಲಾ ಪ್ರಕಾರಗಳ ಮೂಲಕ ಅನಾವರಣ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ನಟ ರಮೇಶ್ ಅರವಿಂದ್, ಕಲೆಯ ಮಹತ್ವವನ್ನು ತಿಳಿಸಿದರು. ಮೂರು ದಿನಗಳ ಉತ್ಸವದಲ್ಲಿ ನೃತ್ಯ, ನಾಟಕ, ಚಿತ್ರಕಲೆ, ಕಿರು ಚಿತ್ರ, ಛಾಯಾಚಿತ್ರ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.
‘ರಾಮ ಕಥಾ’ ವಿಷಯ ಆಧಾರಿತ ಬೃಹತ್ ನೃತ್ಯ ಪ್ರದರ್ಶನದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ, ಪ್ರತಿಭೆ ಪ್ರದರ್ಶಿಸಿದರು. ‘ರಾಮ ಕಥಾ’ ಕಿರಿಯರ ವಿಭಾಗದಲ್ಲಿ ₹ 1 ಲಕ್ಷ ನಗದು ಸಹಿತ ನ್ಯೂ ಹಾರಿಜನ್ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು. ನ್ಯೂ ಹಾರಿಜನ್ ಗುರುಕುಲ ದ್ವಿತೀಯ (₹ 50 ಸಾವಿರ ನಗದು) ಹಾಗೂ ವಿನ್ಸೆಂಟ್ ಪಲ್ಲೊಟ್ಟಿ ಪದವಿಪೂರ್ವ ಕಾಲೇಜು ತೃತೀಯ (₹ 25 ಸಾವಿರ) ಸ್ಥಾನ ಪಡೆದುಕೊಂಡಿತು.
‘ರಾಮ ಕಥಾ’ ಹಿರಿಯರ ವಿಭಾಗದಲ್ಲಿ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜು ಹಾಗೂ ಜೈನ್ ವಿಶ್ವವಿದ್ಯಾಲಯವು ಪ್ರಥಮ ಸ್ಥಾನದೊಂದಿಗೆ ತಲಾ ₹ 1 ಲಕ್ಷ ನಗದು ಪಡೆದವು. ಕಸ್ತೂರಿ ನಗರದ ನ್ಯೂ ಹಾರಿಜನ್ ಕಾಲೇಜು ದ್ವಿತೀಯ (₹ 50 ಸಾವಿರ) ಹಾಗೂ ಪಿಇಎಸ್ ವಿಶ್ವವಿದ್ಯಾಲಯ ತೃತೀಯ (₹ 25 ಸಾವಿರ ) ಸ್ಥಾನ ಪಡೆದುಕೊಂಡಿತು.
ಹಿರಿಯರ ವಿಭಾಗದಲ್ಲಿ ಜಯನಗರದ ಜೈನ್ ವಿಶ್ವವಿದ್ಯಾಲಯ ಹಾಗೂ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಕಿರಿಯರ ವಿಭಾಗದಲ್ಲಿ ನ್ಯೂ ಹಾರಿಜನ್ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.