ADVERTISEMENT

ಫೋಟೊ, ವಿಡಿಯೊ, ಇ–ಮೇಲ್ ಮೂಲಕವೂ ಎಫ್‌ಐಆರ್: ಹೈಕೋರ್ಟ್ ವಕೀಲ ಮಲ್ಲಿಕಾರ್ಜುನ್

* ಜುಲೈ 1ರಿಂದ ಹೊಸ ಕಾನೂನು ಜಾರಿ * ಪೊಲೀಸರು–ಪತ್ರಕರ್ತರಿಗೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 28 ಮೇ 2024, 16:32 IST
Last Updated 28 ಮೇ 2024, 16:32 IST
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜೆ.ಎಂ. ಮಲ್ಲಿಕಾರ್ಜುನಯ್ಯ ಅವರಿಗೆ ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ಅವರು ಸಸಿ ನೀಡಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಮಧುಸೂದನ್ ಜಿ. ಹಾಗೂ ವಕೀಲ ಆರ್.ಎಂ. ಮಲ್ಲಿಕಾರ್ಜುನ್ ಇದ್ದರು
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜೆ.ಎಂ. ಮಲ್ಲಿಕಾರ್ಜುನಯ್ಯ ಅವರಿಗೆ ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ಅವರು ಸಸಿ ನೀಡಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಮಧುಸೂದನ್ ಜಿ. ಹಾಗೂ ವಕೀಲ ಆರ್.ಎಂ. ಮಲ್ಲಿಕಾರ್ಜುನ್ ಇದ್ದರು   

ಬೆಂಗಳೂರು: ‘ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮೂರು ಹೊಸ ಕಾನೂನು ರೂಪಿಸಿದ್ದು, ಇವುಗಳು ಜುಲೈ 1ರಿಂದ ದೇಶದಾದ್ಯಂತ ಜಾರಿಯಾಗಲಿವೆ. ಯಾವುದೇ ಘಟನೆಗೆ ಸಂಬಂಧಪಟ್ಟಂತೆ ಫೋಟೊ, ವಿಡಿಯೊ, ಇ– ಮೇಲ್ ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿ ತ್ವರಿತವಾಗಿ ಎಫ್‌ಐಆರ್ ದಾಖಲಿಸಿಕೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ’ ಎಂದು ಹೈಕೋರ್ಟ್ ವಕೀಲ ಆರ್.ಎಂ. ಮಲ್ಲಿಕಾರ್ಜುನ್ ತಿಳಿಸಿದರು.

ನಗರದಲ್ಲಿ ಪೊಲೀಸರು ಹಾಗೂ ಪತ್ರಕರ್ತರಿಗಾಗಿ ಮಂಗಳವಾರ ಆಯೋಜಿಸಿದ್ದ ‘ಮೂರು ಹೊಸ ಕಾನೂನುಗಳ ಪರಿಚಯ’ ವಿಶೇಷ ಕಾರ್ಯಾಗಾರದಲ್ಲಿ ಅವರು ವಿಷಯ ಮಂಡಿಸಿದರು.

‘ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಯಾಗುತ್ತಿದೆ. ಇದರ ಜೊತೆಯಲ್ಲಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯೂ ಜಾರಿಗೆ ಬರಲಿದೆ. ಈ ಮೂರು ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು’ ಎಂದು ಅವರು ಹೇಳಿದರು.

ADVERTISEMENT

‘ಡಿಜಿಟಲ್ ಸಾಕ್ಷ್ಯಗಳಿಗೆ ಹೊಸ ಕಾಯ್ದೆಯಲ್ಲಿ ಮಹತ್ವ ನೀಡಲಾಗಿದೆ. ಯಾವುದೇ ವ್ಯಕ್ತಿ, ಘಟನೆಯ ವಿಡಿಯೊ, ಫೋಟೊ, ಇ–ಮೇಲ್ ಹಾಗೂ ಇತರೆ ರೂಪದಲ್ಲಿ ಮಾಹಿತಿ ನೀಡಿದರೆ ಪೊಲೀಸರು ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳಬೇಕು. ಹಳೇ ಪ್ರಕರಣ ಅಥವಾ ಶಿಕ್ಷೆ ಪ್ರಮಾಣ ಕಡಿಮೆ ಇರುವ ಪ್ರಕರಣಗಳಲ್ಲಿ, ಏಕಾಏಕಿ ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲ. ದೂರು ಸ್ವೀಕರಿಸಿ ಮಾಹಿತಿ ಕಲೆಹಾಕಲು 14 ದಿನಗಳ ಕಾಲಾವಕಾಶವಿದೆ. ಕೃತ್ಯವು ಮೇಲ್ನೋಟಕ್ಕೆ ಸಾಬೀತಾದರೆ ಮಾತ್ರ ಎಫ್‌ಐಆರ್ ದಾಖಲಿಸಬಹುದು’ ಎಂದು ಅವರು ತಿಳಿಸಿದರು.

‘ದೂರುದಾರರ ಜೊತೆಯಲ್ಲಿ ಆರೋಪಿಗೂ ಕೃತ್ಯದ ಬಗ್ಗೆ ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಕೃತ್ಯ ನಡೆದರೂ, ಠಾಣೆ ಮಿತಿ ಇಲ್ಲದೇ ಸಮೀಪದ ಠಾಣೆಗೆ ದೂರು ಕೊಡಲು ಹೊಸ ಕಾಯ್ದೆ ಅವಕಾಶ ನೀಡಿದೆ. ತನಿಖೆ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ, ಪ್ರಕರಣ ಇತ್ಯರ್ಥಪಡಿಸಲು ನ್ಯಾಯಾಲಯಗಳಿಗೂ ಮಿತಿ ನಿಗದಿಪಡಿಸಲಾಗಿದೆ’ ಎಂದು ಅವರು ಹೇಳಿದರು.

358 ಸೆಕ್ಷನ್‌ಗಳಿಗೆ ಇಳಿಕೆ: ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಗೌಡಪ್ಪನವರ ಮಾತನಾಡಿ, ‘ಐಪಿಸಿಯಲ್ಲಿ 511 ಸೆಕ್ಷನ್‌ಗಳಿವೆ. ಬಿಎನ್‌ಎಸ್‌ನಲ್ಲಿ ಸೆಕ್ಷನ್‌ಗಳನ್ನು 358ಕ್ಕೆ ಇಳಿಸಲಾಗಿದೆ. ಆದರೆ, ಯಾವುದೇ ಹಳೇ ಅಂಶವನ್ನು ಕೈಬಿಟ್ಟಿಲ್ಲ. ಕೆಲ ಮಾರ್ಪಾಡು ಮಾತ್ರ ಮಾಡಲಾಗಿದೆ’ ಎಂದರು.

‘ಸಂಘಟಿತ ಅಪರಾಧ, ಭಯೋತ್ಪಾದನೆ ಅಂಶಗಳನ್ನು ಹೊಸ ಕಾಯ್ದೆಯಲ್ಲಿ ಸೇರಿಸಲಾಗಿದೆ. ಮಾರಣಾಂತಿಕ ಹಲ್ಲೆ ಮಾಡಿ ಕಾಯಂ ಅಂಗವಿಕಲರನ್ನಾಗಿಸುವ ಹಾಗೂ ಹಾಸಿಗೆ ಹಿಡಿಯುವಂತೆ ಮಾಡುವವರಿಗೆ ಜೀವನ ಪರ್ಯಂತ ಜೈಲು ಶಿಕ್ಷೆ ಇದೆ. ಸರ, ಮೊಬೈಲ್ ಕಿತ್ತೊಯ್ಯುವ ಕೃತ್ಯವನ್ನು ಕಳ್ಳತನ ಪಟ್ಟಿಗೆ ಸೇರಿಸಲಾಗಿದೆ. ಆರ್ಥಿಕ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡವರು ನೊಂದುಕೊಂಡು ಮೃತಪಟ್ಟರೆ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಹೊಸ ಕಾಯ್ದೆಯ ಕೆಲ ಸೆಕ್ಷನ್‌ಗಳಲ್ಲಿ ಅಸ್ಪಷ್ಟತೆ ಇದ್ದು, ಈ ಬಗ್ಗೆ ಪರಿಶೀಲನೆ ನಡೆಯಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.