ADVERTISEMENT

ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಹೊಸ ನೀತಿ: ಗೃಹ ಸಚಿವ ಜಿ. ಪರಮೇಶ್ವರ

ವಿಧಾನಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 16:20 IST
Last Updated 16 ಜುಲೈ 2024, 16:20 IST
<div class="paragraphs"><p>ಗೃಹ ಸಚಿವ ಜಿ. ಪರಮೇಶ್ವರ</p></div>

ಗೃಹ ಸಚಿವ ಜಿ. ಪರಮೇಶ್ವರ

   

ಬೆಂಗಳೂರು: ಬಿಬಿಎಂಪಿ, ಪೊಲೀಸ್‌ ಮತ್ತು ಸಾರಿಗೆ ಇಲಾಖೆಗಳ ಜತೆ ಚರ್ಚಿಸಿ ರಾಜಧಾನಿಯಲ್ಲಿನ ವಾಹನ ನಿಲುಗಡೆ (ಪಾರ್ಕಿಂಗ್‌) ಸಮಸ್ಯೆ ನಿವಾರಣೆಗೆ ಹೊಸ ನೀತಿಯೊಂದನ್ನು ರೂಪಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಎಸ್‌.ಆರ್‌. ವಿಶ್ವನಾಥ್‌ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಬೆಂಗಳೂರಿನಲ್ಲಿ ವಾಹನ ದಟ್ಟಣೆ ಅತಿಯಾಗುತ್ತಿದೆ. ಪಾರ್ಕಿಂಗ್‌ ನೀತಿ ಇಲ್ಲದಿರುವುದು, ವಾಹನಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಯಾಗದೇ ಇರುವುದು ಸಮಸ್ಯೆಗೆ ಕಾರಣ. ಹೊಸ ನೀತಿಯಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು’ ಎಂದರು.

ADVERTISEMENT

ನಗರದಲ್ಲಿ 1,194 ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧವಿದೆ. ಆದರೆ, ಆ ರಸ್ತೆಗಳಲ್ಲೇ ವಾಹನ ನಿಲುಗಡೆ ಮಾಡುತ್ತಾರೆ. ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ. ಆದರೂ, ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಹೇಳಿದರು.

‘ಸ್ಥಳಾವಕಾಶ ಕಡ್ಡಾಯಗೊಳಿಸಿ’: ‘ಕಟ್ಟಡ ನಿರ್ಮಿಸುವಾಗಲೇ ವಾಹನ ನಿಲುಗಡೆಗೆ ಸ್ಥಳ ಮೀಸಲಿಡುವುದನ್ನು ಕಡ್ಡಾಯಗೊಳಿಸಬೇಕು. ನಾನು ಬಿಡಿಎ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಪ್ರಾಧಿಕಾರದಲ್ಲಿ ಅಂತಹ ನಿರ್ಣಯ ಮಾಡಿಸಿದ್ದೆ. ಮನೆಗಳಲ್ಲಿ ಕನಿಷ್ಠ ಎರಡು ಕಾರುಗಳಿಗೆ ಜಾಗ ಮೀಸಲಿಟ್ಟರೆ ಮಾತ್ರ ನಕ್ಷೆ ಮಂಜೂರಾತಿ ನೀಡುವ ವ್ಯವಸ್ಥೆ ತರುವಂತೆ ಸಲಹೆ ನೀಡಿದ್ದೆ. ಆ ಕ್ರಮವನ್ನು ಜಾರಿಗೊಳಿಸಿ’ ಎಂದು ವಿಶ್ವನಾಥ್‌ ಆಗ್ರಹಿಸಿದರು.

ಕೆಲವರು ಮನೆಗಳ ಮುಂಭಾಗದಲ್ಲಿ ಕಾರು ನಿಲ್ಲಿಸಿ, ತಿಂಗಳುಗಟ್ಟಲೆ ತೆಗೆಯವುದಿಲ್ಲ. ಬಹುತೇಕ ರಸ್ತೆಗಳಲ್ಲಿ ಎರಡೂ ಬದಿ ಕಾರುಗಳ ನಿಲುಗಡೆ ಮಾಡುವುದರಿಂದ ವಾಹನ ಸಂಚಾರ ಕಷ್ಟವಾಗುತ್ತಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದರು.

ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ‘ರಸ್ತೆಯ ಶೇಕಡ 30ರಷ್ಟು ಪ್ರದೇಶ ವಾಹನ ನಿಲುಗಡೆಗೆ ಬಳಕೆಯಾಗುತ್ತಿದೆ. ಬಹುಮಹಡಿ ವಾಹನ ನಿಲುಗಡೆ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಲ್ಲಿಂದ ಸಮೀಪದ ಸ್ಥಳಗಳಿಗೆ ಬಸ್‌ ಸೌಕರ್ಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಸಂಚಾರ ವಿಭಾಗದ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳು ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆಯ ಅವಧಿಯಲ್ಲಿ ಎರಡು ಗಂಟೆ ರಸ್ತೆಗಳಲ್ಲಿ ನಿಂತು ಸಂಚಾರ ನಿಯಂತ್ರಿಸುವಂತೆ ಸೂಚಿಸಲಾಗಿದೆ’ ಎಂದು ಪರಮೇಶ್ವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.