ADVERTISEMENT

ಬಿಬಿಎಂಪಿ | ಆಸ್ತಿ ನಿರ್ವಹಣೆಗೆ ಹೊಸ ನಿಯಮ ಅಧಿಸೂಚನೆ: ನಗರಾಭಿವೃದ್ಧಿ ಇಲಾಖೆ

ಪಾಲಿಕೆ ಆಸ್ತಿ 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ಇಲ್ಲ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 23:30 IST
Last Updated 22 ಜುಲೈ 2024, 23:30 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ಬಿಬಿಎಂಪಿ ಆಸ್ತಿಗಳನ್ನು 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ನೀಡುವುದನ್ನು ನಿರ್ಬಂಧಿಸುವ ಹೊಸ ನಿಯಮಗಳ ಕರಡು ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ.

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ನಿರ್ವಹಣೆ ನಿಯಮ– 2024’ ಅನ್ನು ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ. ಈ ನಿಯಮಗಳು ಅಂತಿಮ ಅಧಿಸೂಚನೆಯಾದ ಮೇಲೆ ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ– 2020’ರ 11ನೇ ಅಧ್ಯಾಯನದಲ್ಲಿ ಬದಲಾವಣೆಗೊಂಡು ಸೇರ್ಪಡೆಯಾಗಲಿವೆ.

ADVERTISEMENT

ಬಿಬಿಎಂಪಿಯ ಎಲ್ಲ ಆಸ್ತಿಗಳ ಪಟ್ಟಿಯನ್ನು ಆಸ್ತಿಗಳ ವಿಭಾಗದಲ್ಲಿ ನಿರ್ವಹಣೆಯಾಗುವಂತೆ ಮುಖ್ಯ ಆಯುಕ್ತರು ನೋಡಿಕೊಳ್ಳಬೇಕು. ವಲಯಗಳಲ್ಲೂ ವಲಯ ಆಯುಕ್ತರು ಇದೇ ರೀತಿಯ ಪಟ್ಟಿಯನ್ನು ಹೊಂದಿರಬೇಕು. ಪಾಲಿಕೆಯ ಆಸ್ತಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳು ಹಾಗೂ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಲು ಅವಕಾಶವಿರುತ್ತದೆ. ಹೀಗೆ ಮಾರುವುದಕ್ಕೂ ಮುನ್ನ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ. ಬಿಬಿಎಂಪಿಯ ಆಸ್ತಿಗಳನ್ನು ಮಾರಾಟ ಮಾಡುವಾಗ ನೋಂದಣಿ ಮತ್ತು ಮುದ್ರಾಂಕ ಕಾಯ್ದೆಯಂತೆ (45–ಬಿ) ನಿಗದಿಪಡಿಸಲಾಗಿರುವ ಮಾರ್ಗಸೂಚಿ ದರವನ್ನೇ ಅನುಸರಿಸಬೇಕು.

ಬಿಬಿಎಂಪಿಯ ಸ್ಥಿರಾಸ್ತಿಗಳನ್ನು ಗುತ್ತಿಗೆಗೆ ನೀಡುವಾಗ ಹಲವು ಮಾನದಂಡಗಳನ್ನು ಮುಖ್ಯ ಆಯುಕ್ತರು ಅನುಸರಿಸಬೇಕು. ಸ್ಥಿರಾಸ್ತಿಗಳ ಗುತ್ತಿಗೆ ಅವಧಿ ಐದು ವರ್ಷವಾಗಿದ್ದರೆ, ಸಂಬಂಧಿಸಿದ ಸ್ಥಾಯಿ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಐದು ವರ್ಷಕ್ಕಿಂತ ಹೆಚ್ಚು ಹಾಗೂ 15 ವರ್ಷಕ್ಕಿಂತ ಕಡಿಮೆ ಅವಧಿಗೆ ಗುತ್ತಿಗೆ ನೀಡಬೇಕಾದರೆ ಪಾಲಿಕೆಯ ಕೌನ್ಸಿಲ್‌ ಅನುಮತಿ ಪಡೆಯಬೇಕು. 15 ವರ್ಷದಿಂದ ಗರಿಷ್ಠ 30 ವರ್ಷಗಳವರೆಗೆ ಗುತ್ತಿಗೆ ನೀಡಲು ರಾಜ್ಯ ಸರ್ಕಾರದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಯಾವುದೇ ಸ್ಥಿರಾಸ್ತಿಯನ್ನು ಪಾಲಿಕೆಯು ಗುತ್ತಿಗೆ ನೀಡುವಂತಿಲ್ಲ ಎಂದು ಕರಡು ನಿಯಮಗಳಲ್ಲಿ ವಿವರಿಸಲಾಗಿದೆ.

ಪಾಲಿಕೆ ಈಗಾಗಲೇ 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ನೀಡಿದ್ದರೆ, ಅದರ ನವೀಕರಣ ಸಂದರ್ಭದಲ್ಲಿ 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ನೀಡುವಂತಿಲ್ಲ. ಇದಲ್ಲದೆ, ಠೇವಣಿ, ಬಾಡಿಗೆಯನ್ನೂ ಮಾರ್ಗಸೂಚಿ ದರದಂತೆ ನಿಗದಿಪಡಿಸುವ ಲೆಕ್ಕಾಚಾರವನ್ನು ಹೊಸ ನಿಯಮಗಳಲ್ಲಿ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.