ಬೆಂಗಳೂರು: ಬೆಂಗಳೂರಿನ ಎರಡನೇ ಅತೀ ಹೆಚ್ಚು ಸಂಚಾರ ಒತ್ತಡ ಹೊಂದಿರುವ ಯಶವಂತಪುರ ರೈಲು ನಿಲ್ದಾಣ ಈಗ ಹೈಟೆಕ್ ಸ್ವರೂಪ ಪಡೆದುಕೊಳ್ಳುತ್ತಿದೆ. ವಿಮಾನ ನಿಲ್ದಾಣ ಮಾದರಿಯಲ್ಲಿ ಈ ನಿಲ್ದಾಣವನ್ನು ಮರುವಿನ್ಯಾಸಗೊಳಿಸುವ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಈ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಶ್ವದರ್ಜೆ ಮೂಲಸೌಕರ್ಯಗಳು ಲಭ್ಯವಾಗಲಿವೆ.
ದೇಶದ 400 ರೈಲು ನಿಲ್ದಾಣಗಳನ್ನು ಮರು ವಿನ್ಯಾಸ ಯೋಜನೆಯಡಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ರೈಲ್ವೆ ಇಲಾಖೆ 2017ರಲ್ಲಿ ಯೋಜನೆ ರೂಪಿಸಿತ್ತು. ಮೊದಲ ಹಂತದಲ್ಲಿ 23 ರೈಲು ನಿಲ್ದಾಣಗಳ ಮರು ವಿನ್ಯಾಸಕ್ಕೆ ಕ್ರಮ ಕೈಗೊಂಡಿತ್ತು. ಈ ಪಟ್ಟಿಯಲ್ಲಿ ಯಶವಂತಪುರ ರೈಲು ನಿಲ್ದಾಣವೂ ಸ್ಥಾನ ಪಡೆದಿತ್ತು. ಕಂಟೋನ್ಮೆಂಟ್ ರೈಲು ನಿಲ್ದಾಣವೂ ಈ ಪಟ್ಟಿಯಲ್ಲಿ ಇದೆ.
2018ರಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆಯಿತು. 20 ಎಕರೆ ಜಾಗ ಹೊಂದಿರುವ ಯಶವಂತಪುರ ರೈಲು ನಿಲ್ದಾಣದಲ್ಲಿ ನವೀಕರಣ ಕಾಮಗಾರಿ ಭರದಿಂದ ಸಾಗಿದೆ.
ಕಮಾನುಗಳ ನಿರ್ಮಾಣ, ಗಾಜಿನ ಮೇಲ್ಚಾವಣಿ ಕಂಬಿಗಳನ್ನು ಜೋಡಿಸುವ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಅದಕ್ಕೆ ತಕ್ಕಂತೆ ಗಾಜು ಜೋಡಣೆ ಕೆಲಸ ನಡೆಯುತ್ತಿದೆ. ನಿಲ್ದಾಣದ ಮುಂಭಾಗದ ಜಾಗದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗುತ್ತಿದೆ.
ರೈಲಿಗಾಗಿ ಕಾಯುವ ಪ್ರಯಾಣಿಕರು ವಿಶ್ರಾಂತಿ ಪಡೆದುಕೊಳ್ಳಲು ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಊಟ ಮತ್ತು ಉಪಾಹಾರಕ್ಕೆ ಅತ್ಯಾಧುನಿಕ ಕ್ಯಾಂಟೀನ್‌ಗಳು ನಿರ್ಮಾಣಗೊಳ್ಳಲಿವೆ.
ಹೈಟೆಕ್ ಶೌಚಾಲಯ, ನೀರಿನ ಕೂಲರ್‌ಗಳು, ಉಚಿತ ಮತ್ತು ರಿಯಾಯಿತಿ ದರದಲ್ಲಿ ವೈ–ಫೈ ಸೌಕರ್ಯ, ಅಲ್ಲಿ ಫ್ಯಾನ್‌ಗಳ ಅಳವಡಿಕೆ, ಎಟಿಎಂಗಳು, ಟಿ.ವಿಯನ್ನು ಒಳಗೊಂಡ ವಿಶ್ರಾಂತಿ ಕೊಠಡಿಗಳು, ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ, ಎತ್ತರಿಸಿದ ಮಾರ್ಗಗಳು, ಎಸ್ಕಲೇಟರ್‌ಗಳು, ಆಟೊ ಮತ್ತು ಟ್ಯಾಕ್ಸಿಗಳ ನಿಲುಗಡೆಗೆ ಸುಸಜ್ಜಿತ ಮತ್ತು ಕ್ರಮಬದ್ಧವಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.
ಕಾಮಗಾರಿ ಪೂರ್ಣಗೊಂಡ ನಂತರ, ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಬಂದಂತಹ ಅನುಭವ ಆಗಬೇಕು. ಟಿಕೆಟ್ ಕೌಂಟರ್‌ನಿಂದ ಹಿಡಿದು ಶೌಚಾಲಯದ ತನಕ ಎಲ್ಲವೂ ಹೈಟೆಕ್ ಆಗಲಿದೆ ಎನ್ನುತ್ತಾರೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು.
ತಡೆರಹಿತ ಹೆಬ್ಬಾಗಿಲು
ನಿಲ್ದಾಣ ಪ್ರವೇಶಿಸಲು ಇರುವ ಸಣ್ಣ ಸಣ್ಣ ದ್ವಾರಗಳ ಬದಲಿಗೆ ದೈತ್ಯವಾದ ಕಪ್ಪೆಚಿಪ್ಪಿನ ಆಕಾರದ ತಡೆರಹಿತ ದ್ವಾರ ನಿರ್ಮಿಸಲಾಗುತ್ತಿದೆ.
ಮುಂಭಾಗ ಆರು ಕಮಾನುಗಳು ನಿರ್ಮಾಣವಾಗಿವೆ. ಎಲ್ಲವಕ್ಕೂ ಒಂದೇ ಬಣ್ಣದ ಗಾಜಿನ ಹೊದಿಕೆ ಹೊದಿಸಲಾಗುತ್ತಿದೆ. ಏಕರೂಪದ ವಿದ್ಯುದ್ದೀಪಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ನಿಲ್ದಾಣ ಮತ್ತು ಅದರ ಸುತ್ತಮುತ್ತಲ ಪ್ರದೇಶ ಒಂದೇ ಬಣ್ಣದಲ್ಲಿ ಕಾಣಿಸುವಂತೆ ಲೈಟಿಂಗ್ ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ವಾಹನ ನಿಲುಗಡೆಗೆ ವಿಶಾಲ ಜಾಗ
ನಿಲ್ದಾಣದ ಹೊರಭಾಗದಲ್ಲಿ ಇರುವ ಎಲ್ಲ ಜಾಗವನ್ನೂ ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.
ಖಾಲಿ ಉಳಿದಿದ್ದ ಮೂಲೆ ಪ್ರದೇಶವನ್ನೂ ಬಳಸಿಕೊಂಡು ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ವಿಶಾಲ ತಾಣ ಅಭಿವೃದ್ಧಿಪಡಿಸಲಾಗುತ್ತಿದೆ.
ಪ್ರಯಾಣಿಕರನ್ನು ಇಳಿಸಿ ಹೋಗುವ ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳಿಗೆ ಪ್ರತ್ಯೇಕ ರಸ್ತೆ ಇರಲಿದೆ. ಬಿಎಂಟಿಸಿ ಬಸ್‌ಗಳು ನಿಲ್ದಾಣದ ಆವರಣಕ್ಕೆ ಬರುವಷ್ಟು ಜಾಗ ಕಲ್ಪಿಸಲಾಗುತ್ತಿದೆ. ರೈಲು ಇಳಿದ ಪ್ರಯಾಣಿಕರು ಆವರಣದಲ್ಲೇ ಬಸ್ ಏರಲು ಅವಕಾಶ ಆಗಲಿದೆ.
ಪಾದಚಾರಿ ಮೇಲ್ಸೇತುವೆ
ಮೆಟ್ರೊ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪವೂ ಈ ಯೋಜನೆಯಲ್ಲಿ ಇದೆ.
ಕೇಬಲ್ ಆಧರಿತ ಮೇಲ್ಸೇತುವೆ ನಿರ್ಮಾಣವಾದರೆ ಮೆಟ್ರೊ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಮೆಟ್ಟಿಲುಗಳನ್ನು ಇಳಿದು– ಹತ್ತುವ ಸಮಸ್ಯೆ ಇಲ್ಲವಾಗಲಿದೆ.
ಈ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ವಹಿಸಲಿದೆ. ಅದಕ್ಕೆ ಬೇಕಿರುವ ಒಪ್ಪಿಗೆಯನ್ನು ನೈರುತ್ಯ ರೈಲ್ವೆ ಈಗಾಗಲೇ ನೀಡಿದೆ.
ಪಾದಚಾರಿ ಮೇಲ್ಸೇತುವೆ ಕಾಮಗಾರಿ ಮುಂದಿನ 15ರಿಂದ 18 ತಿಂಗಳುಗಳಲ್ಲಿ ಪೂರ್ಣಗೊಂಡು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ ಎಂದು ನೈರುತ್ಯ ರೈಲ್ವೆ ಹೇಳಿದೆ.
ಕಾರಂಜಿ, ಉದ್ಯಾನ
ರೈಲು ನಿಲ್ದಾಣ ಮತ್ತು ಮೆಟ್ರೊ ರೈಲು ನಿಲ್ದಾಣದ ನಡುವೆ ಇರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಬಣ್ಣ ಬಣ್ಣದ ಹೂವಿನ ಗಿಡಗಳು, ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ, ಕುಟೀರ ಮಾದರಿಯ ವಿಶ್ರಾಂತಿ ತಾಣ, ಕಾರಂಜಿ ಕೊಳ, ಸೆಲ್ಫಿ ತಾಣಗಳೂ ನಿರ್ಮಾಣವಾಗುತ್ತಿವೆ.
ರೈಲಿಗಾಗಿ ಕಾಯುವ ಪ್ರಯಾಣಿಕರು ಮಕ್ಕಳೊಂದಿಗೆ ಆಡಿಕೊಂಡು ಕಾಲ ಕಳೆಯಲು ಇದರಿಂದ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಒಂದನೇ ದ್ವಾರವೂ ಹೈಟೆಕ್
ಯಶವಂತಪುರ ನಿಲ್ದಾಣದ ಪೂರ್ವ ಭಾಗದ ಪ್ರವೇಶ ದ್ವಾರವನ್ನೂ ಹೈಟೆಕ್ ಮಾಡಲಾಗುತ್ತಿದೆ.
ಯಶವಂತಪುರ ಮಾರುಕಟ್ಟೆ ಕಡೆ ಭಾಗದಲ್ಲಿರುವ ಒಂದನೇ ಪ್ರವೇಶ ದ್ವಾರದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ವಿಶೇಷ ವಿನ್ಯಾಸವಿರುವ ಆರು ಪ್ರವೇಶ ಕೆನೋಪಿಗಳನ್ನು ನಿರ್ಮಿಸಲಾಗುತ್ತಿದೆ. ಹೈಟೆಕ್ ನೆಲಹಾಸು, ಸುಸಜ್ಜಿತ ಪಾದಚಾರಿ ಮಾರ್ಗ, ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳ ಸಂಚಾರಕ್ಕೆ ವಿಶಾಲವಾದ ಮಾರ್ಗ, ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ನಿರ್ಮಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.