ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಕೈಗೊಳ್ಳಲು ಬೆಂಗಳೂರು ಕಮಿಷನರೇಟ್ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ಫೋಟ ಹಾಗೂ ಇತರೆ ಅವಘಡಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಂಡಿರುವ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುವವರ ಮುಖಚಹರೆ ಸೆರೆ ಹಿಡಿಯುವುದನ್ನು ಕಡ್ಡಾಯಗೊಳಿಸಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ‘ಎರಡು ವರ್ಷಗಳ ಬಳಿಕ ನಗರದಲ್ಲಿ ಹೊಸ ವರ್ಷವನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಹಾಗೂ ಖಾಸಗಿಯವರ 1.70 ಲಕ್ಷ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ. 20 ಡ್ರೋನ್ ಕ್ಯಾಮೆರಾಗಳು ಹಾರಾಡಲಿವೆ. ಬ್ರಿಗೇಡ್ ರಸ್ತೆ, ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಮುಖಚಹರೆ ಸೆರೆ ಕಡ್ಡಾಯಗೊಳಿಸಲಾಗಿದೆ’ ಎಂದರು.
‘ಪ್ರವೇಶ ದ್ವಾರದಲ್ಲೇ ಕ್ಯಾಮೆರಾ ಇರಲಿದೆ. ಸಾರ್ವಜನಿಕರು ಮಾಸ್ಕ್ ತೆಗೆದು ಕ್ಯಾಮೆರಾಕ್ಕೆ ಮುಖ ತೋರಿಸಿ ಪ್ರವೇಶಿಸಬೇಕು. ಇದರ ನಿರ್ವಹಣೆ ಹೊಣೆಯನ್ನು ಪೊಲೀಸರು ಹಾಗೂ ವ್ಯಾಪಾರ ಸ್ಥಳಗಳ ಮಾಲೀಕರಿಗೆ ವಹಿಸಲಾಗಿದೆ. ಇದರಲ್ಲಿ ಲೋಪವಾದರೆ, ಅವರನ್ನೇ ಹೊಣೆಯನ್ನಾಗಿ ಮಾಡಲಾಗುವುದು’ ಎಂದು ಅವರು ಎಚ್ಚರಿಸಿದರು.
‘ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್ ಪ್ರದೇಶಗಳಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಭದ್ರತೆಗೆ 10 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ವಿಶೇಷ ಗೋಪುರಗಳಲ್ಲಿ ಸಿಬ್ಬಂದಿ ಕಾವಲು ಕಾಯಲಿದ್ದಾರೆ. ಜನರ ಜೊತೆಯಲ್ಲಿ ಮಫ್ತಿಯಲ್ಲಿಯೂ ಸಿಬ್ಬಂದಿ ಇರಲಿದ್ದಾರೆ. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನಗರದ ಪ್ರಮುಖ ಸ್ಥಳಗಳಲ್ಲಿ ಡಿ. 31ರಂದು ಬೆಳಿಗ್ಗೆಯಿಂದ ಪರಿಶೀಲನೆ ನಡೆಸಲಿದ್ದಾರೆ’ ಎಂದು ಹೇಳಿದರು.
ಪಾನಮತ್ತ ಕಿಡಿಗೇಡಿಗಳ ಸ್ಥಳಾಂತರಕ್ಕೆ ಆಂಬುಲೆನ್ಸ್ ಬಳಕೆ: ‘ಪಾನಮತ್ತರಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳನ್ನು ಠಾಣೆಗೆ ಕರೆದೊಯ್ಯಲು ಸಾಧ್ಯವಿಲ್ಲ. ಹೀಗಾಗಿ, ಅಂಥವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲು ಯೋಚಿಸಲಾಗಿದೆ. ಕೆಲ ಆಸ್ಪತ್ರೆಗಳಲ್ಲಿ ಈಗಾಗಲೇ ಪ್ರತ್ಯೇಕ ಆಸನಗಳನ್ನು ಕಾಯ್ದಿರಿಸಲಾಗಿದೆ’ ಎಂದು ಪ್ರತಾಪ್ ರೆಡ್ಡಿ ಹೇಳಿದರು.
29 ದಿನಗಳಲ್ಲಿ 637 ಮಂದಿ ಬಂಧನ: ‘ಹೊಸ ವರ್ಷಾಚರಣೆಗೆ ಡ್ರಗ್ಸ್ ಹಾವಳಿಯೂ ಇದೆ. ಇದರ ನಿಯಂತ್ರಣಕ್ಕೆ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಡಿ. 1ರಿಂದ 29ರವರೆಗೆ 547 ಪ್ರಕರಣ ದಾಖಲಿಸಿಕೊಂಡಿದ್ದಾರೆ. 637 ಮಂದಿಯನ್ನು ಬಂಧಿಸಿ, 344 ಕೆ.ಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.
‘ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆಯಲ್ಲಿ 3,000 ಸಿಬ್ಬಂದಿ’
‘ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿರುವ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಹೆಚ್ಚು ಜನರು ಸೇರುತ್ತಾರೆ. ಈ ಸ್ಥಳಗಳಲ್ಲಿ ಭದ್ರತೆಗೆ 3,000 ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಪ್ರತಾಪ್ ರೆಡ್ಡಿ
ಹೇಳಿದರು.
‘ನಾಲ್ವರು ಡಿಸಿಪಿ, 10 ಎಸಿಪಿ, 30 ಇನ್‌ಸ್ಪೆಕ್ಟರ್ ಭದ್ರತೆಯಲ್ಲಿರಲಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗಿದೆ. ಮಹಿಳೆಯರ ಸಮಸ್ಯೆಗಳಿಗೆ ಮಹಿಳಾ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಲಿದ್ದಾರೆ’ ಎಂದರು.
ಪೊಲೀಸ್ ಸಹಾಯವಾಣಿ – 112
(ಯಾವುದೇ ಕಾನೂನು ಬಾಹಿರ ಚಟುವಟಿಕೆ, ಅನುಮಾನಾಸ್ಪದ ವಸ್ತು, ಡ್ರಗ್ಸ್ ಮಾರಾಟ ಕಂಡುಬಂದರೆ ಹಾಗೂ ತುರ್ತು ಸಹಾಯ ಬೇಕಾದರೆ ಸಾರ್ವಜನಿಕರು ಈ ಸಂಖ್ಯೆಗೆ ಮಾಡಬಹುದು)
ಧ್ವನಿವರ್ಧಕ: ಬಳಕೆಗೆ ಪರವಾನಗಿ ಕಡ್ಡಾಯ
‘ರಾತ್ರಿ 1 ಗಂಟೆಯವರೆಗೆ ವ್ಯಾಪಾರ–ವಹಿವಾಟಿಗೆ ಅವಕಾಶ ನೀಡಲಾಗಿದೆ. ಧ್ವನಿವರ್ಧಕ ಬಳಕೆಗೆ ರಾತ್ರಿ 12 ಗಂಟೆವರೆಗೆ ಅವಕಾಶವಿದೆ. ಆದರೆ, ಪರವಾನಗಿ ಕಡ್ಡಾಯ. ಅಕ್ರಮವಾಗಿ ಧ್ವನಿವರ್ಧಕ ಬಳಸಿದರೆ, ಕಾನೂನು ಕ್ರಮ ಜರುಗಿಸಲು ಎಸಿಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ’ ಎಂದು ಪ್ರತಾಪ್ ರೆಡ್ಡಿ ಹೇಳಿದರು.
‘ಮೇಲ್ಸೇತುವೆಯಲ್ಲಿ ನಿರ್ಬಂಧ; ಪಾನಮತ್ತ ಚಾಲಕರ ಪತ್ತೆಗೆ ಒತ್ತು’
‘ಹೊಸ ವರ್ಷಾಚರಣೆ ಸಂಭ್ರಮದಲ್ಲೂ ಕೆಲವರು ಪಾನಮತ್ತರಾಗಿ ವಾಹನ ಚಲಾಯಿಸಿ ಅಪಘಾತವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಪ್ರತಿಯೊಂದು ಸ್ಥಳಗಳಲ್ಲಿ ಪಾನಮತ್ತ ಚಾಲಕರ ಪತ್ತೆಗೆ ನಿತ್ಯವೂ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ. 31ರಂದು ರಾತ್ರಿ 9 ಗಂಟೆಯಿಂದ ಜ. 1ರ ಬೆಳಿಗ್ಗೆ 6 ಗಂಟೆಯವರೆಗೆ ನಗರದ ಮೇಲ್ಸೇತುವೆಗಳಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ಬಳ್ಳಾರಿ ರಸ್ತೆಯ ಮೇಲ್ಸೇತುವೆ ಹಾಗೂ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಮಾತ್ರ ನಿಷೇಧಿಸಲಾಗಿದೆ’ ಎಂದರು.
‘ವರ್ಷಾಚರಣೆ ಬಳಿಕ ಅಂಕಿ– ಅಂಶ ಬಿಡುಗಡೆ’
‘ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದಿರುವ ಅಪರಾಧಗಳ ಅಂಕಿ– ಅಂಶಗಳನ್ನು ಜನವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.
ವಾಹನಗಳ ಸಂಚಾರ, ನಿಲುಗಡೆ ನಿರ್ಬಂಧ
ಡಿಸೆಂಬರ್ 31ರಂದು ರಾತ್ರಿ 8 ಗಂಟೆಯಿಂದ ತಡರಾತ್ರಿ 1 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ರಾತ್ರಿ 4 ಗಂಟೆಯಿಂದ ಜ. 1ರ ನಸುಕಿನ 3 ಗಂಟೆಯವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
lಎಂ.ಜಿ.ರಸ್ತೆಯಿಂದ ಅನಿಲ್ ಕುಂಬ್ಳೆ ವೃತ್ತ, ರೆಸಿಡೆನ್ಶಿ ರಸ್ತೆ ಜಂಕ್ಷನ್
lಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಿಂದ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್
lಚರ್ಚ್ ಸ್ಟ್ರೀಟ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.