ಬೆಂಗಳೂರು: ಹಳೇ ವರ್ಷ ಕಳೆದು ಹೊಸ ಕ್ಯಾಲೆಂಡರ್ ವರ್ಷ ಬರುತ್ತಿದ್ದು, ಇದರ ಸ್ವಾಗತಕ್ಕೆ ನಗರ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಹೆಚ್ಚು ಜನರು ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸೋಮವಾರವೇ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಸ್ತೆಯ ಅಕ್ಕ–ಪಕ್ಕದ ಪ್ರತಿಯೊಂದು ಅಂಗಡಿಗಳು ಸೌಂದರ್ಯದ ತಾಣಗಳಾಗಿ ಮಾರ್ಪಟ್ಟಿದ್ದು, ನೋಡುಗರ ಗಮನ ಸೆಳೆಯುತ್ತಿವೆ.
ಬಾರ್, ಪಬ್, ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ಹಾಗೂ ದೇಶ– ವಿದೇಶಗಳ ಕಲಾವಿದರನ್ನು ಆಹ್ವಾನಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಪ್ರವೇಶ ಟಿಕೆಟ್‌ಗಳ ಖರೀದಿಯು ಜೋರಾಗಿದೆ.
ಮದ್ಯ, ಪಾನೀಯ ಜೊತೆಗೆ ವಿಶೇಷ ಭೋಜನ ವ್ಯವಸ್ಥೆಯನ್ನೂ ಹಲವೆಡೆ ಮಾಡಲಾಗಿದೆ. ಸ್ನೇಹಿತರು, ಕುಟುಂಬದವರು ಒಟ್ಟಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.
ನಾನಾ ನಮೂನೆಯ ಸಂಗೀತ ವಾದ್ಯಗಳು, ವಿವಿಧ ವೇಷಭೂಷಣಗಳು ಹಾಗೂ ರಂಗುರಂಗಿನ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು ಸಂಭ್ರಮಿಸಲು ಯುವಜನತೆ ತಯಾರಿ ಮಾಡಿಕೊಂಡಿದೆ.
ಪೊಲೀಸರ ಬಿಗಿ ಭದ್ರತೆ: ಹೊಸ ವರ್ಷಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಭದ್ರತೆಗೆ ಪೊಲೀಸರು ಹೆಚ್ಚಿನ ಒತ್ತು ನೀಡಿದ್ದಾರೆ. 7 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 270 ಹೊಯ್ಸಳ ವಾಹನಗಳು ನಗರದಾದ್ಯಂತ ಗಸ್ತು ತಿರುಗಲಿವೆ.
ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಭದ್ರತಾ ಗೋಪುರ ಹಾಗೂ 500ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಾಂತಿಗೆ ಧಕ್ಕೆ ತರುವ ಹಾಗೂ ಅಪರಾಧ ಕೃತ್ಯ ಎಸಗುವರ ಪತ್ತೆಗೆ ಡ್ರೋನ್ ಕ್ಯಾಮೆರಾಗಳನ್ನೂ ಬಳಸಲಾಗುತ್ತಿದೆ.
‘ವಿದ್ಯುತ್ ದೀಪ ಆರಿಸುವುದಿಲ್ಲ’
‘ಹಳೇ ವರ್ಷ ಕಳೆದು ಹೊಸ ವರ್ಷ ಆರಂಭವಾಗುವ ಸಂದರ್ಭದಲ್ಲಿ ಬ್ರಿಗೇಡ್ ರಸ್ತೆಯಲ್ಲಿ ವಿದ್ಯುತ್ ದೀಪ ಆರಿಸಿ, ಪುನಃ ಹಚ್ಚಲಾಗುತ್ತಿತ್ತು. ಭದ್ರತಾ ದೃಷ್ಟಿಯಿಂದ ಈ ಬಾರಿ ದೀಪ ಆರಿಸುವುದಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.