ADVERTISEMENT

ತಾರುಣ್ಯಕ್ಕೆ ಕಾಲಿಟ್ಟ ಶತಮಾನ: ಕುಣಿದು ಕುಪ್ಪಳಿಸಿದ ಯುವಜನ

2020ಕ್ಕೆ ಸಡಗರದ ಸ್ವಾಗತ * ಪಬ್‌, ರೆಸ್ಟೋರಂಟ್‌ಗಳಲ್ಲಿ ಮೋಜು–ಮಸ್ತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 22:16 IST
Last Updated 31 ಡಿಸೆಂಬರ್ 2019, 22:16 IST
ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷದ ಸ್ವಾಗತದಲ್ಲಿ ಸಂಭ್ರಮಿಸಿದ ಜನರು–ಪ್ರಜಾವಾಣಿ ಚಿತ್ರ
ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷದ ಸ್ವಾಗತದಲ್ಲಿ ಸಂಭ್ರಮಿಸಿದ ಜನರು–ಪ್ರಜಾವಾಣಿ ಚಿತ್ರ   
""
""
""

ಬೆಂಗಳೂರು: ಲವಲವಿಕೆ, ಉಲ್ಲಾಸ, ಉತ್ಸಾಹ. ಬಾನೆತ್ತರ ಹಾರಿದ ಬಲೂನು, ಹರ್ಷೊದ್ಗಾರ, ಕುಣಿತ, ಮೋಜು–ಮಸ್ತಿ... 21ನೇ ಶತಮಾನವು ಹದಿಹರೆಯ ಮುಗಿಸಿ ತಾರುಣ್ಯ ಪ್ರವೇಶಿಸುತ್ತಿದ್ದಂತೆಯೇ ನಗರದಲ್ಲಿ ಕಂಡು ಬಂದ ಸಂಭ್ರಮವಿದು. ಯುವ ಮನಸುಗಳಂತೂ 2020ನೇ ಇಸವಿಯನ್ನು ಅಪರಿಮಿತ ಖುಷಿಯೊಂದಿಗೆ ಬರಮಾಡಿಕೊಂಡರು.

ಮಂಗಳವಾರ ರಾತ್ರಿ ಗಡಿಯಾರದ ಮುಳ್ಳು 12 ಅಂಕಿಯನ್ನು ದಾಟುತ್ತಿದ್ದಂತೆಯೇ ಜನ ಪರಸ್ಪರ ಕೈ–ಕುಲುಕಿ, ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದೆಲ್ಲೆಡೆ ಸಿಡಿಮದ್ದುಗಳ ಸದ್ದು ಮೊಳಗಿತು. ಶಿಳ್ಳೆ– ಕೇಕೆ ಸದ್ದು ಮುಗಿಲು ಮುಟ್ಟಿತು. ಪಬ್‌ –ರೆಸ್ಟೋರಂಟ್‌ಗಳ ಒಳಗಿದ್ದ ಯುವಸಮೂಹದ ಸಂಭ್ರಮದ ಪರಿ ಕಂಡು, ಚಳಿ ಕೂಡ ಕೆಲಹೊತ್ತು ನಡುಗಿ ಹಿಂದಡಿಯಿಟ್ಟಿತು. ಕಾಲಚಕ್ರ ಉರುಳಿದ ಕ್ಷಣವನ್ನು ಹಲವರು ಮದಿರೆಯ ಮತ್ತಿನಲ್ಲೇ ಸ್ವಾಗತಿಸಿದರು.

ಹೊಸ ವರ್ಷಾಚರಣೆಗಾಗಿ ನವವಧುವಿನಂತೆ ಸಿಂಗಾರಗೊಂಡಿದ್ದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಕೋರಮಂಗಲ,
ಇಂದಿರಾನಗರ, ಅಶೋಕನಗರ, ಎಚ್‌ಎಸ್‌ಆರ್‌ ಲೇಔಟ್, ಮಹದೇವಪುರ, ಹೆಣ್ಣೂರು, ವೈಟ್‌ಫೀಲ್ಡ್, ಬೆಳ್ಳಂದೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರಂಟ್‌ಗಳಲ್ಲಿ ನೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕಿ ಜನ
ಕುಣಿದು ಕುಪ್ಪಳಿಸಿದರು. ಶಿಳ್ಳೆ, ಚಪ್ಪಾಳೆ ತಟ್ಟಿ ನಲಿದರು.

ADVERTISEMENT
ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷದ ಸ್ವಾಗತದಲ್ಲಿ ಸಂಭ್ರಮಿಸಿದ ಯುವತಿಯರು –ಪ್ರಜಾವಾಣಿ ಚಿತ್ರ

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌ಗೆ ಸಂಜೆಯಿಂದಲೇ ಜನ, ಗುಂಪು ಗುಂಪಾಗಿ ಬರಲಾರಂಭಿಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಇಲ್ಲಿ ಜನಸಾಗರವೇ ಸೇರಿತ್ತು. ನಗರ, ಹೊರ ಜಿಲ್ಲೆ, ರಾಜ್ಯ ಹಾಗೂ ಹೊರ ದೇಶಗಳಿಂದಲೂ ಬಂದಿದ್ದ ಜನ, ತಮ್ಮ ಅಭಿರುಚಿಗೆ ತಕ್ಕಂತೆ ಹೊಸವರ್ಷಾಚರಣೆ ಮಾಡಿದರು. ಈ ರಸ್ತೆಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಜನ ಸೇರಿದ್ದರು.

ಮೊದಲೇ ಯೋಜನೆ ರೂಪಿಸಿಕೊಂಡಿದ್ದ ಹಲವರು,ಶಾಪಿಂಗ್ ಮಾಲ್‌, ಬಾರ್- ರೆಸ್ಟೋರಂಟ್‌, ಪಬ್‌ಗಳಲ್ಲಿ ಸೀಟುಗಳನ್ನು ಕಾಯ್ದಿರಿಸಿದ್ದರು. ಅವರವರ ಮನೆಗಳಿಂದಲೇ ಗ್ರಾಹಕರನ್ನು ಕರೆತರುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಯುವ ಸಮೂಹ, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರು ಜೊತೆಯಾಗಿ ಹಳೇ ವರ್ಷವನ್ನು ಬೀಳ್ಕೊಟ್ಟು ಹೊಸ ಕ್ಯಾಲೆಂಡರ್‌ ವರ್ಷವನ್ನು ಸಂಭ್ರಮ ಹಾಗೂ ಸಡಗರದಿಂದ ಬರಮಾಡಿಕೊಂಡರು.

ನಗರದ ಎಂಜಿ ರಸ್ತೆಯಲ್ಲಿಹೊಸವರ್ಷದಸ್ವಾಗತದ ಸಂಭ್ರಮದಲ್ಲಿ ಭಾಗವಹಿಸಲು ಹರಿದುಬಂದ ಜನಸ್ತೋಮ –ಪ್ರಜಾವಾಣಿ ಚಿತ್ರ

ವಿಭಿನ್ನ ವೇಷ, ವಿಶಿಷ್ಟ ಆಚರಣೆ: ತಲೆಯ ಮೇಲೆ ಕೆಂಪು ಬಣ್ಣದ ಜೋಡಿ ಕೋಡು, ಮುಖದ ಮೇಲೆ ವಿಭಿನ್ನ ಚಿತ್ರಗಳನ್ನು ಬಿಡಿಸಿಕೊಂಡು ವಿಶಿಷ್ಟ ವೇಷ–ಭೂಷಣಗಳಲ್ಲಿ ಯುವಸಮೂಹ ಕಂಗೊಳಿಸಿತು.

ನಾನಾ ನಮೂನೆಯ ಸಂಗೀತ ವಾದ್ಯಗಳು, ಬಲೂನು, ಹೊಸ ವರ್ಷ ಶುಭಾಶಯ ಕೋರುವ ಫಲಕಗಳನ್ನು ಹಿಡಿದು ತಂಡೋಪತಂಡವಾಗಿ ಬಂದಿದ್ದರು. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಯುವ ಜನತೆ ವರ್ಷಪೂರ್ತಿ ಇದೇ ಹರ್ಷ ಇರಲೆಂದು ಹಾರೈಸಿದರು.

ವಾಹನ ಸಂಚಾರ ಬಂದ್‌: ರಾತ್ರಿ11ರ ನಂತರ ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್‌ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್‌ ಮಾಡಿ, ಜನರ ಓಡಾಟಕ್ಕಷ್ಟೇ ಮೀಸಲಿರಿಸಲಾಗಿತ್ತು. ಅಲ್ಲೆಲ್ಲ ಸಂಚರಿಸಿದ ಜನ, ಸೆಲ್ಫಿ ತೆಗೆದುಕೊಂಡರು. ಗಡಿಯಾರದ ಮುಳ್ಳು ರಾತ್ರಿ 12ಕ್ಕೆ ಯಾವಾಗ ತಲುಪುತ್ತದೆ ಎಂದು ಕಾಯುತ್ತಲೇ ರಸ್ತೆಯಲ್ಲಿ ಅತ್ತಿತ್ತ ಓಡಾಡುತ್ತಿದ್ದ ಜನ, ಆ ಸಮಯ ಬಂದೊಡನೇ ಬ್ರಿಗೇಡ್‌ ರಸ್ತೆಯಲ್ಲಿ ಪಟಾಕಿ ಸಿಡಿಸಿ ಕೈ ಕೈ ಹಿಡಿದು ಸಮೂಹ ನೃತ್ಯ ಮಾಡಿದರು.

ಕುಟುಂಬ ಸಮೇತರಾಗಿ ಬಂದಿದ್ದ ಕೆಲವು ಜನರು, ಗದ್ದಲ ಹಾಗೂ ಸಂದಣಿಯಿಂದ ದೂರವಿದ್ದುಕೊಂಡೇ ಹೊಸ ವರ್ಷಾಚರಣೆಯನ್ನು ಕಣ್ತುಂಬಿಕೊಂಡರು.

ಮೆಟ್ರೊದಲ್ಲಿ ದಟ್ಟಣೆ
ಮಧ್ಯರಾತ್ರಿ ಹೊಸ ವರ್ಷ ಬರಮಾಡಿಕೊಂಡ ಜನ, ಏಕಕಾಲದಲ್ಲೇ ಮನೆಯತ್ತ ಹೊರಟರು. ಈ ವೇಳೆ ಹೆಚ್ಚು ಜನ ಅವಲಂಬಿಸಿದ್ದು ಮೆಟ್ರೊ ರೈಲನ್ನು. ಎಂ.ಜಿ. ರಸ್ತೆ, ಕಬ್ಬನ್‌ ಪಾರ್ಕ್ ಹಾಗೂ ಟ್ರಿನಿಟಿ ನಿಲ್ದಾಣಗಳಲ್ಲಿ ಹೆಚ್ಚು ಜನ ಜಮಾಯಿಸಿದ್ದರು.

ಕಳೆದ ವರ್ಷದಂತೆ ಈ ವರ್ಷವೂ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಬಾರದೆಂದು, ಪ್ರಯಾಣಿಕರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.ಎಂ.ಜಿ.ರಸ್ತೆ ನಿಲ್ದಾಣದ ಬಳಿ ಬ್ಯಾರಿಕೇಡ್‌ಗಳ ಅಳವಡಿಸಿದ್ದ ಭದ್ರತಾ ಸಿಬ್ಬಂದಿ, ಅದರ ಮಧ್ಯದಲ್ಲಿ ಪ್ರಯಾಣಿಕರನ್ನು ಸಾಲಾಗಿ ನಿಲ್ದಾಣದೊಳಗೆ ಕಳುಹಿಸಿದರು.

ಮನೆ–ಕಚೇರಿಗಳಲ್ಲಿಯೂ ಸಂಭ್ರಮ
ಹಲವರು‌ ಮನೆಗಳಲ್ಲಿ, ಕಚೇರಿಗಳಲ್ಲಿಯೇ ಹೊಸ ವರ್ಷದ ವಿಶೇಷ ಕಾರ್ಯಕ್ರಮ ಹಾಗೂ ಔತಣಕೂಟ ಆಯೋಜಿಸಿದ್ದರು. ಸಂಜೆಯಿಂದಲೇ ಪಾನೀಯ ಜೊತೆಗೆ ಹಾಡು, ನೃತ್ಯ, ಆಟಗಳ ಮೂಲಕ ಸಂತಸ ಪಟ್ಟರು.ಕೇಕ್ ಕತ್ತರಿಸುವ ಮೂಲಕ 2020ಕ್ಕೆ ಸ್ವಾಗತ ಕೋರಿದರು.

ಸ್ನೇಹಿತರು, ಸಂಬಂಧಿಕರು, ಕುಟುಂಬದವರು ಪರಸ್ಪರ ಶುಭಾಶಯ ಕೋರಿ ಕುಣಿದು ಕುಪ್ಪಳಿದರು. ಕೆಲವರು ಚರ್ಚ್‌ಗಳಿಗೆ ತೆರಳಿ ಮೋಂಬತ್ತಿ ಹಚ್ಚುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.