ADVERTISEMENT

ಕೆರೆಗಳ ಪುನಶ್ಚೇತನ ಆದೇಶ ನಿರ್ಲಕ್ಷ್ಯ: ಮತ್ತೆ ಚಾಟಿ ಬೀಸಿದ ಎನ್‌ಜಿಟಿ

ಅಧಿಕಾರಿಗಳ ವಿರುದ್ಧ ಅಸಮಾಧಾನ

ಸಿದ್ದಯ್ಯ ಹಿರೇಮಠ
Published 12 ಡಿಸೆಂಬರ್ 2019, 1:47 IST
Last Updated 12 ಡಿಸೆಂಬರ್ 2019, 1:47 IST
   

ನವದೆಹಲಿ: ‘ಬೆಂಗಳೂರಿನ ಕೆರೆಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದಲ್ಲದೆ, ಪುನಶ್ಚೇತನದ ಆದೇಶ ಪಾಲಿಸದಿರುವುದೂ ಸರಿಯಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಬೆಳ್ಳಂದೂರು ಕೆರೆಯಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಪೀಠ, ಸ್ಥಳೀಯರ ಸಹಯೋಗದೊಂದಿಗೆ ಜಲಮೂಲಗಳ ಸಂರಕ್ಷಣೆಗಾಗಿ ಸೂಕ್ತ ಯೋಜನೆ ರೂಪಿಸುವಂತೆ ಸಲಹೆ ನೀಡಿತು.

ಸತತ ಮೂರೂವರೆ ಗಂಟೆ ನಡೆದ ವಿಚಾರಣೆಯ ವೇಳೆ ಹಾಜರಿದ್ದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಅನಿಲ್‌ಕುಮಾರ್‌, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ)ಯ ಅಧ್ಯಕ್ಷ ತುಷಾರ್‌ ಗಿರಿನಾಥ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಸಿ. ಪ್ರಕಾಶ್‌ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಬಿ.ವಿ. ಪಾಟೀಲ ಅವರಿಂದಲೇ ಹಸಿರು ಪೀಠ ವಿವರಣೆ ಪಡೆಯಿತು.

ADVERTISEMENT

ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಪುನಶ್ಚೇತನಕ್ಕೆ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಬೇಕು. ಶೀಘ್ರವೇ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಅಳವಡಿಸಿ ಜನರ ಆರೋಗ್ಯ ರಕ್ಷಿಸಬೇಕು ಎಂದು ನ್ಯಾಯಪೀಠವು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್‌ ಅವರಿಗೆ ಸೂಚಿಸಿತು.

ಎನ್‌ಜಿಟಿ ಸಲಹೆಯ ಮೇರೆಗೆ ಸಲ್ಲಿಸಲಾದ ಸಂಕ್ಷಿಪ್ತ ರೂಪದ ಅನುಪಾಲನಾ ವರದಿಯಲ್ಲಿರುವ ಅಂಶಗಳನ್ನು ಎಳೆಎಳೆಯಾಗಿ ಅವಲೋಕಿಸಿ ಪ್ರತಿ ಅಂಶಕ್ಕೂ ಮಹತ್ವ ನೀಡಿದ ಪೀಠವು, ಉತ್ತರ ನೀಡಲು ವಿಫಲವಾದ ಅಧಿಕಾರಿಗಳಿಗೆ ಕಟುವಾದ ಶಬ್ದಗಳಲ್ಲಿ ಚಾಟಿ ಬೀಸಿತು.

‘ಖಾಸಗಿ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯವು ಕೆರೆಗಳನ್ನು ಸೇರಿಕೊಳ್ಳುತ್ತಿದ್ದರೂ ಬಿಲ್ಡರ್‌ಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಹಸಿರು ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

‘ಒಬ್ಬ ವ್ಯಕ್ತಿ ನಿಮ್ಮ ₹ 100 ಕದ್ದು ಸಿಕ್ಕಿ ಬಿದ್ದರೆ ಆತನನ್ನು ವಿಚಾರಣೆಗೆ ಒಳಪಡಿಸಿ ಎಷ್ಟು ಹಣ ಮರಳಿ ಪಡೆಯುತ್ತೀರಿ, ₹100 ಪಡೆಯುತ್ತೀರಾ ಅಥವಾ ಬರೀ ₹ 10 ವಾಪಸ್‌ ಪಡೆಯುತ್ತೀರಾ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಗೋಯೆಲ್‌, ‘ನೀವು ₹ 110 ವಾಪಸ್‌ ಪಡೆಯಬೇಕಲ್ಲವೇ, ಆದರೂ, ಕೇವಲ ₹ 10 ಮರಳಿ ಪಡೆದಿದ್ದೀರಲ್ಲವೇ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ಕೆರೆಗಳನ್ನು ಹಾಳುಗೆಡವಿದವರನ್ನು ಶಿಕ್ಷೆಗೂ ಒಳಪಡಿಸಿಲ್ಲ. ಪರಿಹಾರ ಮೊತ್ತವನ್ನೂ ಪಡೆದಿಲ್ಲ. ಬದಲಿಗೆ, ಕಾನೂನು ಉಲ್ಲಂಘಿಸಿ ಲಾಭ ಪಡೆಯುವಂತೆ ಸೂಚಿಸಿದ್ದೀರಿ’ ಎಂದು ತಜ್ಞ ಸದಸ್ಯ ನಾಗಿನ್‌ ನಂದಾ ಹೇಳಿದರು.

ಈ ಸಂದರ್ಭ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಯ ವಿವರಣೆಗೆ ತೃಪ್ತರಾಗದ ನಂದಾ, ‘ನೀವು ಉಲ್ಲಂಘನೆಯನ್ನು ತಡೆಯುತ್ತಿಲ್ಲ. ಉಲ್ಲಂಘನೆ ಆದ ನಂತರವೇ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಉಲ್ಲಂಘನೆಯನ್ನು ಮೊದಲೇ ಅರಿತರೆ ತಡೆಯುವುದು ಸುಲಭವಲ್ಲವೇ’ ಎಂದು ಮರುಪ್ರಶ್ನೆ ಎಸೆದರು.

9 ತಿಂಗಳಲ್ಲಿ ಮಗುವೇ ಹುಟ್ಟುತ್ತದೆ..!
‘ಯಾವುದೇ ಕೆಲಸವನ್ನು ಪೂರ್ಣಗೊಳಿಸಲು 9 ತಿಂಗಳಿಗಿಂತ ಅಧಿಕ ಸಮಯ ತೆಗೆದುಕೊಳ್ಳಬಾರದು. 9 ತಿಂಗಳಲ್ಲಿ ಮಗುವೇ ಹುಟ್ಟುತ್ತದೆ ಎಂಬುದು ನಿಮಗೆ ಗೊತ್ತಿಲ್ಲವೇ?’

ಇದು ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ಕೇಳಿದ ಪ್ರಶ್ನೆ. ಬೆಂಗಳೂರಿನ ಕೆರೆಗಳ ಪುನಶ್ಚೇತನಕ್ಕಾಗಿ ಎಸ್‌ಟಿಪಿ ಅಳವಡಿಸಲು ಇನ್ನೂ 9 ತಿಂಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಕೋರುತ್ತಿದ್ದಂತೆಯೇ ಅವರು ಈ ರೀತಿ ಪ್ರಶ್ನಿಸಿದರು.

‘ಯಾವುದೇ ಕಾರ್ಯಕ್ಕೆ 9 ತಿಂಗಳಿಗಿಂತ ಹೆಚ್ಚು ಅವಧಿ ಬೇಕಾಗಿಲ್ಲ. ನಿಮಗೆ ಸಹಾಯ ಮಾಡುವುದಕ್ಕೆ ನಾವು ತಜ್ಞರನ್ನೂ ಸೂಚಿಸುತ್ತೇವೆ. ನೀವು ಪಾಲಿಸಬೇಕಷ್ಟೇ’ ಎಂದು ಅವರು ಕಿವಿಮಾತು ಹೇಳಿದರು.

ಕೆರೆ ಸಂರಕ್ಷಣೆಗಾಗಿ ಹಸಿರುಪೀಠ ಹೇಳಿದ್ದು

* ಎಸ್‌ಟಿಪಿ ಅಳವಡಿಕೆಗೆ 8 ತಿಂಗಳ ಕಾಲಾವಕಾಶ ಕೋರುತ್ತಿರುವ ಐಎಎಸ್‌ ಅಧಿಕಾರಿಗಳು ಅವಧಿ ಮುಗಿದ ವೇಳೆ ಆ ಹುದ್ದೆಯಲ್ಲಿ ಇರುವುದೇ ಇಲ್ಲ

* ಐಎಎಸ್‌ ಎಂದರೆ ‘ಐ ಆ್ಯಮ್‌ ಸೇಫ್‌’ ಎಂದು ಅಧಿಕಾರಿಗಳು ಭಾವಿಸಿದಂತಿದೆ ಅಲ್ಲವೇ?

* ನಾವು ಇಲ್ಲಿ ಯಾರ ವಿರುದ್ಧವೂ ಟೀಕಿಸಲು ಕುಳಿತಿಲ್ಲ. ನೀವು ಆದೇಶ ಪಾಲಿಸಬೇಕಷ್ಟೇ

* ಕೊಳಚೆ ನೀರು ಶುಧ್ಧೀಕರಿಸಲು ಎಷ್ಟು ಹಣ ಬೇಕು? ನಿಮ್ಮ ಸಂಬಳದಿಂದಲೇ ಆ ಹಣವನ್ನು ಏಕೆ ಪಡೆದುಕೊಳ್ಳಬಾರದು?

* ಪರಿಸರ ರಕ್ಷಣೆ ಎಲ್ಲರ ಹೊಣೆ ಎನ್ನುತ್ತ ಜನರನ್ನೇ ನಿಷ್ಪ್ರಯೋಜಕರೆಂದು ಜರಿಯಬಾರದು

* ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಮೇಲ್ವಿಚಾರಣಾ ಸಮಿತಿಯ ಶಿಫಾರಸುಗಳು ಸೂಕ್ತವಲ್ಲ ಎಂದು ಭಾವಿಸಕೂಡದು

* ಅಧಿಕಾರಿಗಳು ಕೆರೆಗಳಿಗೆ ಭೇಟಿ ನೀಡಿ ಸುತ್ತಲಿನ ಜನರನ್ನು ಮಾತಾಡಿಸಿ ವಸ್ತುಸ್ಥಿತಿ ಅರಿಯಬೇಕು

* ಬೆಂಗಳೂರು ಸುಂದರವಾದ ನಗರ. ಕೆರೆಗಳಿದ್ದ ನಗರ, ಅದರ ಅಂದ ಹಾಳುಗೆಡವಬಾರದು

* ನಿಮಗೆ ಅಧಿಕಾರ ನೀಡಲಾಗಿದೆ. ಇಚ್ಛಾಶಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದು ಅಲ್ಲವೇ?

* ಕೆರೆಗಳ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ತಜ್ಞರ ಸಲಹೆ ಪಾಲಿಸಬೇಕು

* ಕೊಳಚೆ ನೀರನ್ನು ಶುದ್ಧೀಕರಿಸಿ ನೀರಾವರಿ ಜಮೀನಿಗೆ ಪೂರೈಸಬಹುದು. ನಗರದಲ್ಲಿನ ಉದ್ಯಾನದಲ್ಲಿರುವ ಗಿಡ–ಮರಗಳಿಗೂ ನೀರುಣಿಸಬಹುದು

*ಸಮಿತಿಗಳು ವರದಿ ಸಲ್ಲಿಸಿದ ನಂತರವೇ ಕ್ರಮ ಕೈಗೊಳ್ಳಬೇಕಿಲ್ಲ. ಸ್ವಯಂ ಇಚ್ಛೆಯಿಂದಲೇ ಯೋಜನೆ ರೂಪಿಸಬಹುದು

* ನಿಮ್ಮ ತಜ್ಞರು ಏನು ಮಾಡುತ್ತಾರೆ. ಒಂದು ವರ್ಷವಾದರೂ ನೀವು ಯಾವುದೇ ತಜ್ಞರನ್ನು ಯಾಕೆ ಸಂಪರ್ಕಿಸಿಲ್ಲ?

* ಬೆಂಗಳೂರು ನಗರದಲ್ಲಿ ಜಲ ತಜ್ಞರೂ ಪರಿಸರ ತಜ್ಞರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಸಹಾಯ ಪಡೆದುಕೊಳ್ಳಬಹುದು

* ಬೆಂಗಳೂರಿನ ಜನ ಒಳ್ಳೆಯವರು, ಬುದ್ದಿವಂತರು. ನೀವು ಅವರನ್ನು ವಿಶ್ವಾಸಕ್ಕೇ ತೆಗೆದುಕೊಂಡಿಲ್ಲ

* ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಿಮ್ಮ ಹೇಳಿಕೆಗಳಲ್ಲಿ ತಿಳಿಸಿದ್ದೀರಿ. ಆದರೆ, ನೀವು ಮಾಡಿದ್ದೇನು?

* ಸರ್ಕಾರ ಎನ್‌ಜಿಟಿ ಆದೇಶಕ್ಕೆ ಯಾಕೆ ಕಾಯಬೇಕು, ಮುಖ್ಯ ಕಾರ್ಯದರ್ಶಿಯೇ ಸ್ವತಃ ಕ್ರಮ ಕೈಗೊಳ್ಳಬಹುದಲ್ಲವೇ?

* ಕೆಲಸವನ್ನು 2020ಕ್ಕೆ ಪೂರ್ಣಗೊಳಿಸುತ್ತೇವೆ ಎಂದು ಹೇಳುತ್ತ ಬರೀ ಟಿ–20 ಪಂದ್ಯ ಆಡಲು ಬಯಸುತ್ತೀರಲ್ಲ?

* ತಜ್ಞರ ಸಲಹೆ ಪಡೆದು ಕೆರೆಗಳನ್ನು ಸುಂದರ ಪ್ರವಾಸಿ ತಾಣ ಮಾಡಬಹುದು. ನೀವು ಕಾರ್ಯ ಪ್ರವೃತ್ತರಾಗಿ. ಟೆಂಡರ್ ಪ್ರಕ್ರಿಯೆ ಇಟ್ಟುಕೊಳ್ಳಬೇಡಿ


**

ಎನ್‌ಜಿಟಿಗೆ ರಾಜ್ಯ ಸರ್ಕಾರದ ವಿವರಣೆ

* ಕೆರೆಗಳ ಸ್ಥಿತಿ ಈಗ ಮೊದಲಿಗಿಂತ ಸುಧಾರಿಸಿದೆ. ಕೆಲವು ವರ್ಷಗಳ ಸತತ ಪ್ರಯತ್ನದಿಂದ ಈ ಅಭಿವೃದ್ಧಿ ಕಂಡು ಬಂದಿದೆ.

* ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ನೇತೃತ್ವದ ಮೇಲ್ವಿಚಾರಣಾ ಸಮಿತಿ ಸಲ್ಲಿಸಿದ ವರದಿಯನ್ನೂ ಪಾಲಿಸಲಾಗುತ್ತಿದೆ

* ಕೆರೆಗಳ ಹೂಳು ಎತ್ತುವುದು ನಿಜಕ್ಕೂ ಕಠಿಣ ಕಾರ್ಯ. ನಿತ್ಯ 900 ಲಾರಿ ಹೂಳು ತೆರವುಗೊಳಿಸಬೇಕಿದೆ

* ನಗರದಲ್ಲಿ ಆರು ಎಸ್‌ಟಿಪಿ ಅಳವಡಿಸಲಾಗುತ್ತಿದೆ. ಖಾಸಗಿಯವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ

* ಒಣ (ಖುಷ್ಕಿ) ಭೂಮಿಯ ಅಭಿವೃದ್ಧಿ ಕುರಿತೂ ಸೂಕ್ತ ಯೋಜನೆ ರೂಪಿಸಲಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಿ ನೀರಾವರಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ

* ನಿಯಮ ಉಲ್ಲಂಘಿಸಿದವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ

* ಹೂಳು, ಕೆಸರು ಮತ್ತು ಕಳೆ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸುಸಜ್ಜಿತ ಎಸ್‌ಟಿಪಿ ಅಳವಡಿಸಲು ಕನಿಷ್ಠ 3 ವರ್ಷ ಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.