ADVERTISEMENT

ಟ್ಯಾನರಿ ರಸ್ತೆ ಕಸಾಯಿಖಾನೆ ಆಧುನೀಕರಣಕ್ಕೆ ಬಿಬಿಎಂಪಿಗೆ ಸೂಚನೆ

ಹಲಸೂರು ಕೆರೆಯ ಮಾಲಿನ್ಯ: ಬಿಬಿಎಂಪಿಗೆ ಸೂಚನೆ, ಗಡುವು ನೀಡಿದ ಎನ್‌ಜಿಟಿ ಸಮಿತಿ

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:47 IST
Last Updated 29 ಮೇ 2022, 19:47 IST
ಹಲಸೂರು ಕೆರೆ ಕೊಳಚೆ ನೀರಿನಿಂದ ಹಾಳಾಗಿರುವ ದೃಶ್ಯ. – ಪ್ರಜಾವಾಣಿ ಚಿತ್ರ.
ಹಲಸೂರು ಕೆರೆ ಕೊಳಚೆ ನೀರಿನಿಂದ ಹಾಳಾಗಿರುವ ದೃಶ್ಯ. – ಪ್ರಜಾವಾಣಿ ಚಿತ್ರ.   

ನವದೆಹಲಿ:ಬೆಂಗಳೂರಿನ ಹಲಸೂರು ಕೆರೆಯ ಮಾಲಿನ್ಯದ ಬಗ್ಗೆ ಅಧ್ಯಯನ ಮಾಡಲು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ರಚಿಸಿರುವ ಜಂಟಿ ಸಮಿತಿಯು, 2024ರಮಾರ್ಚ್ 31ರೊಳಗೆ ಟ್ಯಾನರಿ ರಸ್ತೆಯಲ್ಲಿರುವ ಕಸಾಯಿಖಾನೆಯನ್ನು ಆಧುನೀಕರಿಸುವಂತೆ ಬಿಬಿಎಂಪಿಗೆ ಸೂಚಿಸಿದೆ.

‘ಈ ಗಡುವಿನೊಳಗೆ ಕಸಾಯಿಖಾನೆಯಿಂದ ತ್ಯಾಜ್ಯ ದ್ರವ ಮತ್ತು ಕೊಳಚೆ ನೀರು ಆಚೆ ಬರದಂತೆ ತಡೆಗಟ್ಟಬೇಕು. ಘನತ್ಯಾಜ್ಯ ನಿರ್ವಹಣೆಗೆಜೈವಿಕ ಅನಿಲ ಸ್ಥಾವರ ಮತ್ತು ಕೊಳಚೆ ನೀರಿನ ಸಂಸ್ಕರಣಾ ಘಟಕದಂತಹ ದೀರ್ಘಾವಧಿಯ ಸೌಲಭ್ಯಗಳನ್ನು ಅಳವಡಿಸಿಕೊಂಡು ಕಸಾಯಿಖಾನೆ ಸಂಪೂರ್ಣ ಆಧುನೀಕರಣಗೊಂಡಿರುವುದನ್ನುಬಿಬಿಎಂಪಿಯು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಜಂಟಿ ಸಮಿತಿಯು ಎನ್‌ಜಿಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದನ್ನುವಸತಿ ಕಟ್ಟಡಗಳ ಮಾಲೀಕರಿಂದ ಬಿಡಬ್ಲ್ಯುಎಸ್‌ಎಸ್‌ಬಿ ಖಚಿತಪಡಿಸಿಕೊಳ್ಳಬೇಕು.2023ರಮಾರ್ಚ್ 31ರೊಳಗೆ ಮಳೆನೀರಿನ ಚರಂಡಿಗಳಲ್ಲಿ ಸಿಲ್ಟ್ ಟ್ರ್ಯಾಪ್‌ಗಳು (ಹೂಳು ಬಲೆ) ಮತ್ತು ಕಸದ ತಡೆಗೋಡೆಗಳ ಅಳವಡಿಕೆ, ಸಂಸ್ಕರಿಸಿದ ಕೊಳಚೆನೀರನ್ನು ಹೊರಹಾಕಲು ಕ್ಯಾಸ್ಕೇಡಿಂಗ್ ಏರೇಟರ್‌ಗಳನ್ನು ಅಳವಡಿಸುವುದನ್ನು ಪೂರ್ಣಗೊಳಿಸುವಂತೆ ಸಮಿತಿ ಹೇಳಿದೆ.

ADVERTISEMENT

ಕಸಾಯಿಖಾನೆಯನ್ನು ಆಧುನೀಕರಿಸುವವರೆಗೆ, ಕಸಾಯಿಖಾನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೇಂದ್ರ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ(ಸಿಇಟಿಪಿ) ಸಾಗಿಸಿ, ಅಲ್ಲಿ ಸಂಸ್ಕರಣೆಯಾಗುವುದನ್ನು ಬಿಬಿಎಂಪಿ ಖಚಿತಪಡಿಸಿಕೊಳ್ಳಬೇಕು ಎಂದು ಸಮಿತಿಯು ತನ್ನ ಇತ್ತೀಚಿನ ಶಿಫಾರಸಿನಲ್ಲಿ ಹೇಳಿದೆ.

ಇದಕ್ಕೂ ಮೊದಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠವು ಜಂಟಿ ಸಮಿತಿ ರಚಿಸಿ, ಹಲ ಸೂರು ಕೆರೆ ಮಾಲಿನ್ಯಕ್ಕೆ ಕಾರಣ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಸೂಚಿಸಿತ್ತು.ಕಸಾಯಿಖಾನೆಯ ತ್ಯಾಜ್ಯ ನೀರು ಎಸ್‌ಟಿಪಿ ಕಾರ್ಯನಿರ್ವಹಿಸದ ಕಾರಣ, ಸಂಸ್ಕರಣೆಯಾಗದೆ ನೇರವಾಗಿ ಕೆರೆ ಸೇರುತ್ತಿದೆ ಎಂದು ಸಮಿತಿ ಹೇಳಿತ್ತು.

ಆಧುನಿಕ ಕಸಾಯಿಖಾನೆಗೆ ನಿಯಮಾನುಸಾರ ಕಟ್ಟಡ, ಪ್ರಾಣಿ ವಧೆ ಮತ್ತು ಮಾಂಸ ಸಂಸ್ಕರಣೆ ಘಟಕ ಸೇರಿ ಹೊಸ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಕಸಾಯಿಖಾನೆಯನ್ನು ಆಧುನೀಕರಿಸುವುದಾಗಿ ಬಿಬಿಎಂಪಿ ಭರವಸೆ ನೀಡಿದೆ ಎಂದು ಸಮಿತಿಯ ವರದಿಯಲ್ಲಿ ಹೇಳಿದೆ.

ಹಲಸೂರು ಕೆರೆಯಲ್ಲಿರುವ
ಮೀನು ಗಳಲ್ಲಿ ಭಾರಲೋಹಗಳ ಜೈವಿಕ ಶೇಖರಣೆಯ ಬಗ್ಗೆ ಅಧ್ಯಯನ ಕೈಗೊಳ್ಳಲು ಮತ್ತು ಈ ಕೆರೆ
ಯಲ್ಲಿನ ನೀರಿನ ಗುಣಮಟ್ಟದ ಮೇಲ್ವಿಚಾರಣೆ ನಡೆಸುವಂತೆ
ಸಮಿತಿಯು ಮೀನುಗಾರಿಕೆ ಇಲಾಖೆಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.