ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು–ಮೈಸೂರು ಹತ್ತು ಪಥದ ‘ಎಕ್ಸ್‌ಪ್ರೆಸ್ ಹೈವೆ’ ಯೋಜನೆ ಅನುಷ್ಠಾನಕ್ಕೆಆಶ್ರಯ ಮನೆಗಳ ಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿ ಪರಿಣಮಿಸಿದೆ.
‘ಜನರು ಸರ್ಕಾರದ ನೆರವು ಪಡೆದು ಆಶ್ರಯ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಹತ್ತಾರು ವರ್ಷಗಳಿಂದ ಈ ಮನೆಗಳಲ್ಲೇ ವಾಸವಿದ್ದಾರೆ. ಈಗ ಸ್ವಾಧೀನ ಮಾಡಿಕೊಳ್ಳಲು ಮುಂದಾದರೆ ನಿವಾಸಿಗಳು ಪರಿಹಾರ ಕೇಳುತ್ತಿದ್ದಾರೆ. ಆದರೆ, ಸರ್ಕಾರಿ ಜಾಗಕ್ಕೆ ಖಾಸಗಿ ವ್ಯಕ್ತಿಗಳಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಹೇಳುತ್ತಾರೆ.
ಹೆದ್ದಾರಿಯ ಅಂಚಿನಲ್ಲಿರುವ ಸುಮಾರು 9ರಿಂದ 15 ಪ್ರದೇಶಗಳಲ್ಲಿ ಈ ರೀತಿಯ ಸಮಸ್ಯೆ ಇದೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ಸವಾಲಾಗಿದೆ ಎಂದು ಅವರು ಹೇಳುತ್ತಾರೆ.
ಯೋಜನೆಗೆ ಒಟ್ಟು 1,250 ಎಕರೆ ಭೂಸ್ವಾಧೀನ ಆಗಬೇಕಿದ್ದು, ಈ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರ ವಿಶೇಷ ಭೂಸ್ವಾಧೀನಾಧಿಕಾರಿಯನ್ನು ನೇಮಿಸಿದೆ. ರಾಮನಗರದಲ್ಲಿ ಅವರ ಕಚೇರಿ ತೆರೆಯಲಾಗಿದೆ.
‘ಕೆಲವು ರೈತರ ಜಮೀನು ಮೂರು ತಲೆಮಾರಿನಿಂದ ಖಾತೆ ಬದಲಾವಣೆಯಾಗಿಲ್ಲ. ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿರುವ ಪ್ರಕರಣಗಳೂ ಇವೆ. ಈ ರೀತಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಆದರೂ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಭೂಸ್ವಾಧೀನ ಪ್ರಕ್ರಿಯೆ ಮುಗಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಕೆಂಗೇರಿಯ ನೈಸ್ ರಸ್ತೆ ಜಂಕ್ಷನ್‌ನಿಂದ ಮೈಸೂರಿನ ಹೊರವಲಯದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜಂಕ್ಷನ್ ತನಕದ 118 ಕಿ.ಮೀ. ಉದ್ದದ ರಸ್ತೆಯನ್ನು 90 ನಿಮಿಷದಲ್ಲಿ ಕ್ರಮಿಸಲು ಅನುಕೂಲವಾಗುವಂತೆ 10 ಪಥಗಳ ರಸ್ತೆ ನಿರ್ಮಿಸಲಾಗುತ್ತಿದೆ.
ಸ್ಥಳೀಯರ ಓಡಾಟಕ್ಕೆ ಪ್ರತಿ 500 ಮೀಟರ್‌ನಲ್ಲಿ ಅಂಡರ್ ಪಾಸ್ ನಿರ್ಮಾಣ ಆಗಲಿದೆ. ಟೋಲ್ ಸಹಿತ 6 ಪಥ ಮತ್ತು ಎರಡೂ ಬದಿಯಲ್ಲಿ ತಲಾ ಎರಡು ಪಥದ ಟೋಲ್ ರಹಿತ ಸರ್ವೀಸ್ ರಸ್ತೆಗಳು ನಿರ್ಮಾಣ ಆಗಲಿವೆ.
ರಸ್ತೆ ಒತ್ತಡ ನಿವಾರಣೆ: ಬೆಂಗಳೂರು– ಮೈಸೂರು ಮಧ್ಯೆ ವಾಹನಗಳ ಸಂಚಾರ ದಟ್ಟಣೆ ವಿಪರೀತ ಏರಿಕೆಯಾಗಿದೆ. 2004ರಲ್ಲಿ 20 ಸಾವಿರ ಪಿಸಿಯು (ಪ್ಯಾಸೆಂಜರ್ ಕಾರ್ ಯೂನಿಟ್) ಇದ್ದದ್ದು 2017 ಕ್ಕೆ 40 ಸಾವಿರ ಪಿಸಿಯುಗೆ ಏರಿಕೆ ಆಗಿದೆ. ಕಾರುಗಳ ಸಂಚಾರದ ಪ್ರಮಾಣದಲ್ಲಿ ಭಾರೀ ಏರಿಕೆ ಆಗಿದೆ. ಉದ್ದೇಶಿತ ರಸ್ತೆ ನಿರ್ಮಾಣವಾದರೆ ಈಗಿರುವ ಒತ್ತಡ ಕಡಿಮೆಯಾಗಲಿದೆ.
ಪ್ರಥಮ ಎಚ್‌ಎಎಂ ರಸ್ತೆ:ರಾಜ್ಯದಲ್ಲಿ ನಿರ್ಮಾಣವಾಗುವ ಮೊದಲ ಎಚ್‌ಎಎಂ ರಸ್ತೆ ಇದಾಗಿದೆ. ಬಿಒಟಿ (ಬಿಲ್ಟ್, ಆಪರೇಟ್, ಟ್ರಾನ್ಸಫರ್) ವ್ಯವಸ್ಥೆ ಬದಲಿಗೆ ಎಚ್‌ಎಎಂ (ಹೈಬ್ರಿಡ್ ಆನ್ಯುಟಿ ಮೋಡ್) ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಿಕೊಂಡಿದೆ. ಹೆದ್ದಾರಿ ಪ್ರಾಧಿಕಾರ ಶೇ 40 ರಷ್ಟು ಹಣ ತೊಡಗಿಸಿದರೆ, ಉಳಿದ ಶೇ 60 ರಷ್ಟು ಹಣವನ್ನು ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಯೇ ಭರಿಸುತ್ತದೆ.
***
ಯೋಜನೆಯ ವಿವರ
ಮೊದಲ ಹಂತ; ಕೆಂಗೇರಿಯ ನೈಸ್ ರಸ್ತೆ ಜಂಕ್ಷನ್‌ನಿಂದ ನಿಡಘಟ್ಟ– 56.200 ಕಿ.ಮೀ; ಅಂದಾಜು ಮೊತ್ತ– ₹ 3,447 ಕೋಟಿ
ಎರಡನೇ ಹಂತ; ನಿಡಘಟ್ಟದಿಂದ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜಂಕ್ಷನ್–61.104 ಕಿ.ಮೀ, ಅಂದಾಜು ಮೊತ್ತ– ₹ 2,765 ಕೋಟಿ
ಕಾಮಗಾರಿ ನಿರ್ವಹಿಸುತ್ತಿರುವ ಕಂಪನಿ; ದಿಲಿಪ್ ಬಿಲ್ಡ್‌ಕಾನ್ ಲಿಮಿಟೆಡ್
–––––
6 ಕಡೆ ಬೈಪಾಸ್ ರಸ್ತೆ
ನಗರ/ಪಟ್ಟಣ; ಬೈಪಾಸ್ ರಸ್ತೆ ಉದ್ದ(ಕಿ.ಮೀಗಳಲ್ಲಿ)
ಬಿಡದಿ; 6.994
ರಾಮನಗರ ಮತ್ತು ಚನ್ನಪಟ್ಟಣ; 22.35
ಮದ್ದೂರು; 4.459
ಮಂಡ್ಯ; 10.04
ಶ್ರೀರಂಗಪಟ್ಟಣ; 8.194
***
ಸರ್ಕಾರಿ ಜಾಗದಲ್ಲಿ ಆಶ್ರಯ ಮನೆಗಳು ನಿರ್ಮಾಣ ಆಗಿವೆ. ಪರಿಹಾರ ನೀಡದೆ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಸಮಸ್ಯೆ ಪರಿಹಾರ ದೊಡ್ಡ ಸವಾಲಾಗಿದೆ
–ಆರ್.ಕೆ. ಸುರ್ಯವಂಶಿ, ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.