ಬೆಂಗಳೂರು: ಜಮಾತ್– ಉಲ್– ಮುಜಾಹಿದ್ದೀನ್ (ಜೆಎಂಬಿ) ಸಂಘಟನೆ ಶಂಕಿತ ಭಯೋತ್ಪಾದಕರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡು ಅನೇಕ ಕಡೆಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸುತ್ತಿದ್ದರು ಎಂಬ ಕಳವಳಕಾರಿ ಸಂಗತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ.
ಇಲ್ಲಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿದ 25ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಎನ್‌ಐಎ ವಕೀಲ ಪ್ರಸನ್ನ ಕುಮಾರ್ ಮೂಲಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
2005ರಲ್ಲಿ ಬಾಂಗ್ಲಾ ದೇಶದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ ಬಳಿಕ ಜೆಎಂಬಿ ಮುಖಂಡ ಜಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಬಂಧಿತನಾಗಿದ್ದ. 2014ರಲ್ಲಿ ಪೊಲೀಸರ ವಶದಿಂದ ತಪ್ಪಿಸಿಕೊಂಡು ತಮ್ಮ ಸಹಚರ ಜೆಎಂಬಿಯ ಈಗಿನ ಮುಖಂಡ ಸಲವುದ್ದೀನ್ ಸಲಹಿನ್ ಜೊತೆ ಭಾರತದ ಗಡಿಯೊಳಕ್ಕೆ ನುಸುಳಿದ್ದ. ಆನಂತರ ಬೆಂಗಳೂರಿನಲ್ಲಿ ಆಶ್ರಯ ಪಡೆದು, ಸಂಘಟನೆ ಚಟುವಟಿಕೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಬರ್ದ್ವಾನ್ ಸ್ಫೋಟ ಕುರಿತು ಎನ್‌ಐಎ ಕೋಲ್ಕತ್ತ ಅಧಿಕಾರಿಗಳು ನಡೆಸಿದ ವಿಚಾರಣೆಯ ವೇಳೆ, ಪ್ರಕರಣದ ಪ್ರಮುಖ ಆರೋಪಿ ಹಬೀಬುರ್ ರೆಹಮಾನ್ ಜೆಎಂಬಿ ಶಂಕಿತ ಉಗ್ರರು 2014ರಿಂದ 2018ರವರೆಗೆ ಬೆಂಗಳೂರಿನಲ್ಲಿ ಆಶ್ರಯ ಪಡೆದಿದ್ದ ಸ್ಥಳಗಳನ್ನು ಬಹಿರಂಗಪಡಿಸಿದ್ದ. ಚಿಕ್ಕ ಬಾಣಾವರದಲ್ಲಿ ಮನೆ ಬಾಡಿಗೆಗೆ ಪಡೆದು ಅಡಗುದಾಣವಾಗಿ ಬಳಸಲಾಗುತಿತ್ತು. ಖಾದರ್ ಖಾಜಿ, ಸಜ್ಜದ್ ಅಲಿ, ನಾಜಿರ್ ಶೇಖ್, ಆರೀಫ್ ಹುಸೇನ್, ಮೋಟಾ ಅನಾಸ್, ಆಸಿಫ್ ಇಕ್ಬಾಲ್, ಬಿ.ಡಿ ಆರೀಫ್ ಮತ್ತು ಜಹಿದುಲ್ ಇಸ್ಲಾಂ ಈ ಮನೆಯಲ್ಲಿ 2018ರಲ್ಲಿ ಆಶ್ರಯ ಪಡೆದಿದ್ದರು ಎಂದು ಆತ ಬಾಯಿ ಬಿಟ್ಟಿದ್ದಾನೆ. ಈ ಸುಳಿವು ಆಧರಿಸಿ 2019ರ ಜುಲೈ 7ರಂದುಮನೆಯ ಮೇಲೆ ದಾಳಿ ನಡೆದಿತ್ತು.
ಕೋಲ್ಕತ್ತದ ಎನ್‌ಐಎ ಎಸ್‌ಪಿ ಸಿ.ವಿ. ಸುಬ್ಬಾರೆಡ್ಡಿ ಅವರು ಸಿದ್ಧಪಡಿಸಿರುವ ದೋಷಾರೋಪ ಪಟ್ಟಿಯಲ್ಲಿ ನಜೀರ್ ಶೇಖ್, ಆರೀಫ್ ಹುಸೇನ್, ಆಸಿಫ್ ಇಕ್ಬಾಲ್, ಜಹಿದುಲ್ ಇಸ್ಲಾಂ, ಕದೋರ್ ಖಾಜಿ, ಹಬೀಬುರ್ ರೆಹಮಾನ್, ಮಹಮದ್ ದಿಲ್ವಾರ್ ಹುಸೇನ್, ಮುಷ್ತಾಫಿಜುರ್ ರೆಹಮಾನ್, ಅದಿಲ್ ಶೇಖ್, ಅಬ್ದುಲ್ ಕರೀಂ, ಮುಷರಫ್ ಹುಸೇನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇವರೆಲ್ಲರೂ ಬಾಂಗ್ಲಾ ಮತ್ತು ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಿಗೆ ಸೇರಿದವರು.
ಬಿ.ಡಿ ಆರೀಫ್, ಸಲವುದ್ದೀನ್ ಸಲೆಹಿನ್, ಇಜಾಜ್ ಅಹಮದ್, ಸೀಶ್ ಮಹಮದ್, ಅಬ್ದುಲ್ಲಾ ಎಸ್.ಕೆ, ಮಿಂಟು ಹಾಗೂ ಫಾಹಿಂ ಸೇರಿದಂತೆ ಕೆಲವು ಶಂಕಿತರ ವಿರುದ್ಧದ ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಲಾಗಿದೆ. 2014 ಅಕ್ಟೋಬರ್ ನವೆಂಬರ್‌ನಲ್ಲಿ ಮುಷ್ತಾಫಿಜುರ್ ರೆಹಮಾನ್ ಜೊತೆ ಬೆಂಗಳೂರಿಗೆ ಬಂದಿದ್ದ ಜಹಿದುಲ್ ಇಸ್ಲಾಂ ಇಲ್ಲಿ ಆಶ್ರಯ ಪಡೆದು ಸಂಘಟನೆ ಬಲಗೊಳಿಸಲು ಮತ್ತು ಚಟುವಟಿಕೆಗಳಿಗೆ ಚಾಲನೆ ನೀಡಲು ಕಸರತ್ತು ನಡೆಸಿದ್ದ. ಆನಂತರ ಸಲವುದ್ದೀನ್ ಸಲಹಿನ್ ಮತ್ತಿತರ ಶಂಕಿತ ಉಗ್ರರು ಅವರನ್ನು ಸೇರಿಕೊಂಡರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಜಹಿದುಲ್ ಮತ್ತು ಸಹಚರರು ಜೆಎಂಬಿ ಸಿದ್ಧಾಂತ ಪ್ರಚುರಪಡಿಸುವ ಮೂಲಕ ಕೆಲವು ಸ್ಥಳೀಯ ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳಲು ಉದ್ದೇಶಿಸಿದ್ದರು. ಗೋಪ್ಯವಾಗಿ ತರಬೇತಿ ಕೊಡಲು ಯೋಜನೆ ರೂಪಿಸಿದ್ದರು. ಪೊಲೀಸರು ಕಣ್ತಪ್ಪಿಸಲು ತಮ್ಮ ಅಡಗುತಾಣಗಳನ್ನು ಮೇಲಿಂದ ಮೇಲೆ ಬದಲಾಯಿಸುತ್ತಿದ್ದರು. ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯಲು, ಹೊಟೇಲ್ ರೂಂ ಬುಕ್ ಮಾಡಲು ಹಾಗೂ ಮೊಬೈಲ್ ಸಿಮ್‌ಗಳನ್ನು ಪಡೆಯಲು ನಕಲಿ ಗುರುತಿನ ಚೀಟಿ ಬಳಸುತ್ತಿದ್ದರು. ಅಲ್ಲದೆ, ಕೃತಕ ಆಭರಣಗಳು, ಬಟ್ಟೆ, ಮೊಬೈಲ್ ಫೋನ್ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದರು. ಆ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.