ಬೆಂಗಳೂರು‘: ‘ನೈಸ್ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಅನುಮಾನ ಬೇಡ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
‘ಸರ್ಕಾರವನ್ನು ಲೆಕ್ಕಿಸದೆ, ನಿಯಮಗಳನ್ನು ಉಲ್ಲಂಘಿಸಿ ಅವರು ಮುಂದೆ ಹೋಗಿದ್ದಾರೆ’ ಎಂದು ನೈಸ್ ಪ್ರವರ್ತಕ ಅಶೋಕ್ ಖೇಣಿ ಹೆಸರು ಪ್ರಸ್ತಾಪಿಸದೆ ಮುಖ್ಯಮಂತ್ರಿ ಕುಟುಕಿದರು.
‘ಸರ್ಕಾರದ ಆಸ್ತಿ ಸರ್ಕಾರದಲ್ಲೇ ಉಳಿಯಬೇಕು. ಆ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡುತ್ತೇವೆ. ಯಾವುದೇ ಕಾರಣಕ್ಕೂ ದ್ವೇಷದ ರಾಜಕೀಯ ಮಾಡುವುದಿಲ್ಲ’ ಎಂದರು.
‘ಮುಖ್ಯ ಕಾರ್ಯದರ್ಶಿ ಅವರಿಗೆಮುಂದಿನ ಕ್ರಮ ಕೈಗೊಳ್ಳುವ ಜವಾಬ್ದಾರಿ ನೀಡಲಾಗಿದೆ. ಅವರು ಯಾರಿಗೂ ತಲೆಬಾಗುವುದಿಲ್ಲ, ಪ್ರಾಮಾಣಿಕರಿದ್ದಾರೆ. ನನ್ನನ್ನೂ ದಾರಿ ತಪ್ಪಿಸಲು ಆಗುವುದಿಲ್ಲ. ಈ ವಿಷಯದಲ್ಲಿ ಸರ್ಕಾರವನ್ನು ಸುಮ್ಮನಿರಿಸಲು ಸಾಧ್ಯವಿಲ್ಲ’ ಎಂದರು.
ಆಗ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ‘ಈಗ ಈ ವಿಚಾರ ಬೇಡ. ಈ ವಿಷಯದಲ್ಲಿ ಸಾಕಷ್ಟು ಪ್ರಕ್ರಿಯೆಗಳಾಗಬೇಕು’ ಎಂದರು.
**
ಎಲೆಕ್ಟ್ರಿಕ್ ಬಸ್ ಖರೀದಿಗೆ ಬ್ರೇಕ್
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ನಡೆದಿದ್ದ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ.
‘ಎಲೆಕ್ಟ್ರಿಕ್ ಬಸ್ ವಿಚಾರದಲ್ಲಿ ಕೆಲವು ಅಡೆತಡೆಗಳಿವೆ. ಬಸ್ ಸರಬರಾಜು ಮಾಡಲು ಆದೇಶ ಪಡೆದುಕೊಂಡ ಕಂಪನಿಯನ್ನು ಆಂಧ್ರ ಪ್ರದೇಶ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿದೆ. ಈ ಕಾರಣಕ್ಕೆ ವಿಚಾರ ಮಾಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.