ADVERTISEMENT

‘ನೈಟ್‌ ಲೈಫ್’ನಲ್ಲಿ ‘ಕಿಕ್’ ಇಲ್ಲ; ಕಿರಿಕ್ಕೇ ಎಲ್ಲ!

ನಮ್ಮ ನಗರ, ನಮ್ಮ ದನಿ

ಎಂ.ಸಿ.ಮಂಜುನಾಥ
Published 20 ಮೇ 2019, 1:53 IST
Last Updated 20 ಮೇ 2019, 1:53 IST
   

ಬೆಂಗಳೂರು: ಪಬ್‌ಗಳಲ್ಲಿ ನಶೆ ಏರಿಸಿಕೊಂಡು ಹುಚ್ಚೆದ್ದು ಕುಣಿಯುವ ಯುವಜನತೆ. ಅವರ ಅಬ್ಬರದಿಂದ ಕಿರಿಕಿರಿ ಎದುರಿಸುತ್ತಿರುವ ಸ್ಥಳೀಯರು. ಖಾಲಿ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಕ್ರೇಜು. ಫುಟ್‌ಪಾತ್‌ಗಳಲ್ಲೇ ನಿದ್ರೆಗೆ ಜಾರುವ ನಿರಾಶ್ರಿತರು, ಬೆನ್ನಿಗೆ ಚೀಲ ಏರಿಸಿಕೊಂಡು ಬರುವ ಚಿಂದಿ ಆಯುವ ಹುಡುಗ. ಮಧ್ಯರಾತ್ರಿ ರೈಲು ಇಳಿದು ಕಂಗಾಲಾಗುವ ‌ಪ್ರಯಾಣಿಕರು. ತೋಚಿದಷ್ಟು ಬಾಡಿಗೆ ಕೇಳುವ ಆಟೊ ಚಾಲಕರು. ಆಗೊಮ್ಮೆ–ಈಗೊಮ್ಮೆ ಮೊಳಗುವ ಪೊಲೀಸ್ ಹೊಯ್ಸಳದ ಸೈರನ್ ಸದ್ದು...

ಇದು, ಬೆಂಗಳೂರು ನಗರದ ಪ್ರತಿದಿನದ ರಾತ್ರಿ ಚಿತ್ರಣ. ಹಗಲಿಡೀ ವಾಹನ ದಟ್ಟಣೆ, ಹಾರ್ನ್ ಸದ್ದಿನಿಂದಲೇ ಗಿಜಿಗುಡುವ ನಗರವು ಸೂರ್ಯ ಮುಳುಗುತ್ತಿದ್ದಂತೆಯೇ ‘ಕಲರ್‌ಫುಲ್ ಸಿಟಿ’ಯಾಗಿ ಮಗ್ಗಲು ಬದಲಿಸುತ್ತದೆ. ಪ್ರತಿಯೊಂದು ರಸ್ತೆಯ ಚಿತ್ರಣವೂ, ಬದುಕಿನ ತರಹೇವಾರಿ ಕತೆಗಳನ್ನು ಬಿಚ್ಚಿಡುತ್ತದೆ. ಬೆಂಗಳೂರಿನ ಗರ್ಭ ಅರಿಯಬೇಕಾದರೆ ರಾತ್ರಿ ಹೊತ್ತಲ್ಲಿ ಈ ನಗರಿಯ ಮೂಲೆಮೂಲೆಯನ್ನೂ ಸುತ್ತಬೇಕು.

ಏಷ್ಯಾ ಖಂಡದಲ್ಲೇ ಹೆಚ್ಚು ಪಬ್‌ಗಳಿರುವ ನಗರ ಎನಿಸಿಕೊಂಡಿರುವ ಬೆಂಗಳೂರು ಈಗ ಪಾಶ್ಚಾತ್ಯರ, ಪ್ರವಾಸಿಗರ ಹಾಗೂ ಪಾರ್ಟಿ ಪ್ರಿಯರ ನೆಚ್ಚಿನ ತಾಣ. 11 ಗಂಟೆವರೆಗೆ ಇದ್ದ ಮದ್ಯ ಪೂರೈಕೆಯ ಅವಧಿಯನ್ನು ಸರ್ಕಾರ 1 ಗಂಟೆಗೆ ವಿಸ್ತರಿಸಿದ ಮೇಲಂತೂ ಬಾರ್, ರೆಸ್ಟೋರೆಂಟ್, ಪಬ್‌, ಡ್ಯಾನ್ಸ್ ಬಾರ್‌ಗಳು ತಡರಾತ್ರಿಯಾದರೂ ತುಂಬಿ ತುಳುಕುತ್ತಿವೆ.

ADVERTISEMENT

ಆದರೆ, ಇಂತಹ ಪಾರ್ಟಿಗಳಿಂದ ತಮ್ಮ ನಿದ್ರೆಗೆ ಭಂಗ ಆಗುತ್ತಿರುವುದಾಗಿ ನಿತ್ಯ ಹತ್ತಾರು ಮಂದಿ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ. ‘ಸಮುದಾಯ ಪೊಲೀಸಿಂಗ್’ ವ್ಯವಸ್ಥೆಯ ಭಾಗವಾಗಿ ಈಗ ಎಲ್ಲ ಠಾಣೆಗಳ ಪೊಲೀಸರೂ ತಮ್ಮ ವ್ಯಾಪ್ತಿಯ ನಿವಾಸಿಗಳೊಂದಿಗೆ ವಾಟ್ಸ್‌ಆ್ಯಪ್ ಗ್ರೂಪ್‌ ಮಾಡಿಕೊಂಡಿದ್ದಾರೆ. ‘ಈ ಬಾರ್ ಹತ್ತಿರ ಗಲಾಟೆ ಆಗುತ್ತಿದೆ. ಆ ಪಬ್‌ನವರು ಜೋರಾಗಿ ಮ್ಯೂಸಿಕ್ ಹಾಕಿದ್ದಾರೆ’ ಎಂದು ಕೋರಮಂಗಲ ಹಾಗೂ ಇಂದಿರಾನಗರದ ನಿವಾಸಿಗಳಿಂದ ಗ್ರೂಪ್‌ಗಳಿಗೆ ಪ್ರತಿ ರಾತ್ರಿಯೂ ಸಂದೇಶ‌ಗಳು ಹೋಗುತ್ತಿವೆ. ಪೊಲೀಸರು ತಕ್ಷಣ ಹೋಗಿ ಪರಿಸ್ಥಿತಿ ತಿಳಿಗೊಳಿಸುತ್ತಿದ್ದಾರೆ.

ಆ ಅಬ್ಬರದ ಸಂಗೀತದ ಶಬ್ದ ಕೇಳಲಾಗದೆ ಇಂದಿರಾನಗರದ ಕೆಲ ನಿವಾಸಿಗಳು ತಮ್ಮ ಬೆಡ್‌ ರೂಮ್‌ಗಳಿಗೆ ‘ಸೌಂಡ್ ಪ್ರೂಫಿಂಗ್’ ಮಾಡಿಸಿಕೊಂಡಿದ್ದಾರೆ. ಇನ್ನೂ ಕೆಲವರು ವಾಸ್ತವ್ಯವನ್ನೇ ಬದಲಾಯಿಸಿದ್ದಾರೆ. ಜೆ.ಪಿ.ನಗರ, ನ್ಯೂ ಬಿಇಎಲ್ ರಸ್ತೆ, ಹೆಣ್ಣೂರು, ವೈಟ್‌ಫೀಲ್ಡ್‌ನಂತ ವಸತಿ ಪ್ರದೇಶಗಳಲ್ಲೂ ಈಗ ‘ನೈಟ್ ಲೈಫ್’ನ ಅಬ್ಬರ ಜೋರಾಗಿದೆ.

ಹೆಚ್ಚಾದ ದೌರ್ಜನ್ಯಗಳು: ಪಾರ್ಟಿಗೆ ಬಂದ ಯುವತಿಯರು ಮನೆಗೆ ಮರಳಲು ಹೆಚ್ಚು ಅವಲಂಬಿತವಾಗಿರುವುದು ಕ್ಯಾಬ್‌ಗಳಿಗೆ. ಅದರೆ, ರಾತ್ರಿ ವೇಳೆ ಮಾರ್ಗ ಬದಲಿಸಿದ, ಹೆಚ್ಚಿನ ಬಾಡಿಗೆ ಕೇಳಿದ, ಅನುಚಿತವಾಗಿ ವರ್ತಿಸಿದ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳಡಿ ಕಳೆದ ಒಂದೂವರೆ ವರ್ಷದಲ್ಲಿ ಕ್ಯಾಬ್ ಚಾಲಕರ ವಿರುದ್ಧವೇ 48 ಯುವತಿಯರು ನಗರದ ವಿವಿಧ ಠಾಣೆಗಳಿಗೆ ದೂರು ಕೊಟ್ಟಿದ್ದಾರೆ!

ರಾತ್ರಿ 12ರಿಂದ ಬೆಳಿಗ್ಗೆ 6ರ ನಡುವೆಯೇ ಏಳೆಂಟು ರೈಲುಗಳು ನಗರಕ್ಕೆ ಬರುತ್ತವೆ. ಆ ಸಮಯಕ್ಕೆ ಆಟೊ, ಕ್ಯಾಬ್ ಬಿಟ್ಟರೆ ಅವರಿಗೆ ಬೇರೆ ಆಯ್ಕೆಯೇ ಇಲ್ಲ. ಕೆಲವರು ಚಾಲಕ ಕೇಳಿದಷ್ಟು ಬಾಡಿಗೆ ಕೊಟ್ಟು ಹೋದರೆ, ಮತ್ತೆ ಕೆಲವರು ನಡೆದುಕೊಂಡೇ ಮನೆಯತ್ತ ಹೊರಡುತ್ತಾರೆ. ಇಂತವರಿಂದ ಹಣ ದೋಚಲೆಂದೇ ಸುಲಿಗೆಕೋರರು ಹೊಂಚು ಹಾಕಿ ಕುಳಿತಿರುತ್ತಾರೆ. ಪೊಲೀಸ್ ಅಂಕಿ ಅಂಶಗಳ ಪ್ರಕಾರ 2018ರಲ್ಲಿ 1,160 ಮಂದಿ ರಾತ್ರಿ ವೇಳೆ ಸುಲಿಗೆಗೆ ಒಳಗಾಗಿದ್ದಾರೆ.

ಬೆಂಗಳೂರು ನಗರದ ನೈಟ್‌ ಲೈಫ್‌ನ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಚಿತ್ರಗಳು. –ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್

ಕೂಗೆಬ್ಬಿಸಿದ ಪ್ರಕರಣ: 2015ರ ಅಕ್ಟೋಬರ್ 3ರ ರಾತ್ರಿ ಟೆಂಪೊ ಟ್ರಾವೆಲರ್‌ನಲ್ಲಿ (ಟಿ.ಟಿ)ಮಧ್ಯಪ್ರದೇಶದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಹೋರಾಟದ ಸ್ವರೂಪ ಪಡೆದುಕೊಂಡಿತ್ತು. ಸಾರ್ವಜನಿಕ ಸಾರಿಗೆ ಸೇವೆಯ ಅವಧಿಯನ್ನು 1 ಗಂಟೆವರೆಗೆ ವಿಸ್ತರಿಸಬೇಕು ಎಂಬ ಕೂಗೂ ಎದ್ದಿತ್ತು. ಆದರೆ, ಕೂಗಿನ ಸದ್ದು ಕಡಿಮೆ ಆದಂತೆ ಜನರ ಆಗ್ರಹವೂ ನಿಂತು ಹೋಯಿತು.

ಆ ಮಣಿಪುರದ ಯುವತಿ, ನಗರದಲ್ಲಿ ಕಾಲ್‌ಸೆಂಟರ್ ಉದ್ಯೋಗಿಯಾಗಿದ್ದಳು. ಕೆಲಸ ಮುಗಿಸಿಕೊಂಡು ರಾತ್ರಿ 10.30ರ ಸುಮಾರಿಗೆ ಮಡಿವಾಳದ ಅಯ್ಯಪ್ಪಸ್ವಾಮಿ ರಸ್ತೆಗೆ ಬಂದಿದ್ದ ಆಕೆ, ಬಸ್ ಸಿಗದ ಕಾರಣಕ್ಕೆ ಟಿ.ಟಿ ಹತ್ತಿದ್ದಳು. ಆದರೆ, ಮಾರ್ಗ ಬದಲಿಸಿದ್ದ ಚಾಲಕ ಹಾಗೂ ಕ್ಲೀನರ್, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆ ಮೇಲೆ ಅತ್ಯಾಚಾರ ಎಸಗಿದ್ದರು. ‘ಬಸ್ ಇದ್ದಿದ್ದರೆ, ನಾನು ಟಿ.ಟಿ ಹತ್ತುತ್ತಿರಲಿಲ್ಲ’ ಎಂದು ಸಂತ್ರಸ್ತೆಯೇ ಪೊಲೀಸರೆದುರು ಹೇಳಿಕೆ ನೀಡಿದ್ದಳು.

ಕೈಬೀಸಿ ಕರೆಯುವರು: ರಾತ್ರಿ ವಿಶೇಷವಾಗಿ ಮೇಕಪ್ ಮಾಡಿಕೊಂಡು ರಸ್ತೆಯ ಮೂಲೆಯಲ್ಲಿ ನಿಲ್ಲುವ ಮಹಿಳೆಯರದ್ದು ಬೇರೆಯೇ ಕತೆ. ಯಾವುದೇ ಮುಜುಗರವಿಲ್ಲದೆ ಪುರುಷರನ್ನು ಕೈಬೀಸಿ ಕರೆಯುವ ಅವರಿಗೆ ಪೊಲೀಸರ ಬಗ್ಗೆ ಸಣ್ಣ ಅಂಜಿಕೆಯೂ ಇಲ್ಲ.

ಮೆಜೆಸ್ಟಿಕ್, ಕೆಂಗೇರಿ, ಚಿಕ್ಕಪೇಟೆ, ಕೋರಮಂಗಲ, ಮಡಿವಾಳ, ಮೈಕೊಲೇಔಟ್, ಹೆಣ್ಣೂರು ಹೊರವರ್ತುಲ ರಸ್ತೆ, ಬಾಣಸವಾಡಿ, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ... ರಾತ್ರಿ ವೇಳೆ ಜನರ ಓಡಾಟ ಹೆಚ್ಚಿರುವ ಪ್ರದೇಶಗಳಲ್ಲಿ ನಿಲ್ಲುವ ಈ ಮಹಿಳೆಯರು, ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದಾರೆ.

‘ನೈಟ್‌ಲೈಫ್‌’ ಕಿರಿಕಿರಿ ಆಗಬಾರದು: ಕಮಿಷನರ್

‘ಪಬ್‌, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಗಲಾಟೆಗಳು ನಡೆದರೆ ಅವುಗಳ ಮಾಲೀಕರನ್ನೇ ಹೊಣೆ ಮಾಡಿ, ಕನಿಷ್ಠ ಒಂದು ತಿಂಗಳವರೆಗೆ ವಹಿವಾಟು ಬಂದ್ ಮಾಡಿಸಲಾಗುವುದು. ಅಬಕಾರಿ ಕಾಯ್ದೆಯಲ್ಲಿ ಪೊಲೀಸರಿಗೆ ಈ ಅಧಿಕಾರವಿದೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನೈಟ್‌ಲೈಫ್ ಅವಧಿ ವಿಸ್ತರಣೆಯಾದ ಬಳಿಕ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಿದ್ದೇವೆ. ಠಾಣಾ ಸಿಬ್ಬಂದಿ ಮಾತ್ರವಲ್ಲದೇ, ಪ್ರತಿದಿನ ರಾತ್ರಿ ಇಬ್ಬರು ಡಿಸಿಪಿಗಳು ಹಾಗೂ ಎಂಟು ಎಸಿಪಿಗಳು ಇಡೀ ನಗರವನ್ನು ಬೀಟ್ ಹಾಕುತ್ತಿದ್ದಾರೆ. 272 ಹೊಯ್ಸಳಗಳೂ ಇಡೀ ರಾತ್ರಿ ಗಸ್ತು ತಿರುಗುತ್ತಿವೆ’ ಎಂದರು.

‘ಕ್ಯಾಬ್ ಸೇವಾ ಕಂಪನಿಗಳ ಜತೆ ಈಗಾಗಲೇ ಎರಡು ಸಲ ಸಭೆಗಳನ್ನು ನಡೆಸಿದ್ದು, ಪೂರ್ವಾಪರ ಪರಿಶೀಲಿಸಿಯೇ ಚಾಲಕರನ್ನು ನೇಮಿಸಿಕೊಳ್ಳಬೇಕೆಂದು ಸೂಚಿಸಿದ್ದೇವೆ. ಹೀಗಾಗಿ, ಚಾಲಕರು ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದರೆ ಅದಕ್ಕೆ ಕಂಪನಿಯೇ ಹೊಣೆ ಆಗಿರುತ್ತದೆ. ಚಾಲಕ ಮಾತ್ರವಲ್ಲದೆ, ಸಂಬಂಧಪಟ್ಟ ಅಧಿಕಾರಿಗಳನ್ನೂ ಬಂಧಿಸುತ್ತೇವೆ’ ಎಂದು ಅವರು ಎಚ್ಚರಿಸಿದರು.

₹50, ಅರ್ಧ ಪ್ಯಾಕ್ ಸಿಗರೇಟ್‌

ಕೆಲ ಪ್ರತಿಷ್ಠಿತ ಹೋಟೆಲ್‌ಗಳು 2 ಗಂಟೆವರೆಗೆ ವಹಿವಾಟು ನಡೆಸುತ್ತಿದ್ದರೂ ಕೇಳದ ಪೊಲೀಸರು, ಸಣ್ಣಪುಟ್ಟ ಹೋಟೆಲ್‌ಗಳು, ತಳ್ಳುಗಾಡಿಗಳಲ್ಲಿ ತಿಂಡಿ ಮಾರುವುದನ್ನು 12.30ಕ್ಕೇ ಬಂದ್ ಮಾಡಿಸುತ್ತಾರೆ. ಕಾನೂನು ಮಾತನಾಡಿದರೆ ಲಾಠಿಯನ್ನೂ ಬೀಸುತ್ತಿದ್ದಾರೆ.

ಕೋರಮಂಗಲದಲ್ಲಿ ರಾತ್ರಿ ಮಾತಿಗೆ ಸಿಕ್ಕ ಟೀ ಮಾರುವ 17 ವರ್ಷದ ಹುಡುಗನೊಬ್ಬ, ‘ನನ್ನ ವ್ಯಾಪಾರ ಶುರುವಾಗುವುದೇ 11 ಗಂಟೆ ನಂತರ. ಬೆಳಿಗ್ಗೆ 4 ಗಂಟೆವರೆಗೂ ಸೈಕಲ್‌ನಲ್ಲಿ ಟೀ ಮಾರುತ್ತೇನೆ. ಬೈಕ್‌ನಲ್ಲಿ (ಚೀತಾ) ಗಸ್ತು ಬರುವ ಪೊಲೀಸರಿಗೆ ₹ 50 ಹಾಗೂ ಅರ್ಧ ಪ್ಯಾಕ್ ಸಿಗರೇಟ್ ನೀಡಬೇಕು. ಕಾರಿನಲ್ಲಿ (ಹೊಯ್ಸಳ) ಬಂದರೆ ₹ 100 ಹಾಗೂ ಒಂದು ಪ್ಯಾಕ್ ಸಿಗರೇಟ್ ಕೊಡಬೇಕು. ಇಲ್ಲದಿದ್ದರೆ ವ್ಯಾಪಾರಕ್ಕೆ ಬಿಡುವುದಿಲ್ಲ. ನಗರದಲ್ಲಿ ರಾತ್ರಿ ವ್ಯಾಪಾರ ಮಾಡುವ ಎಲ್ಲರೂ ಇದೇ ನಿಯಮ ಪಾಲಿಸುತ್ತಾರೆ’ ಎಂದು ವಿವರಿಸಿದ.

ಇದು ‘ಪಬ್‌ ನಗರ’ವಾಗಿದೆ!

‘ಇಂದಿರಾನಗರದಲ್ಲೇ 80 ಪಬ್‌ಗಳಿದ್ದು, 15 ಸಾವಿರ ಜನ ಬಂದು ಹೋಗುತ್ತಾರೆ. ಪಬ್‌ಗಳ ಬಳಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಎಲ್ಲರೂ ವಸತಿ ಪ್ರದೇಶಕ್ಕೆ ಬಂದು ಮನೆಗಳ ಮುಂದೆ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ರಾತ್ರಿ 1 ಗಂಟೆ ಆಗುತ್ತಿದ್ದಂತೆಯೇ ಅವರ ಪಾರ್ಟಿ ರಸ್ತೆಗೆ ಬರುತ್ತದೆ. ಪೊಲೀಸರು ಬಂದು ಕಳುಹಿಸುವವರೆಗೂ ಅವರ ರಂಪಾಟ ನಿಲ್ಲುವುದೇ ಇಲ್ಲ’ ಎಂದು ‘ಐ–ಚೇಂಜ್ ಇಂದಿರಾನಗರ’ ಆಂದೋಲನದ ರೂವಾರಿ ಸ್ನೇಹಾ ನಂದಿಹಾಳ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿದಿನ ಬೆಳಿಗ್ಗೆ ಕಾಂಪೌಂಡ್‌ನ ಒಳಗೆ ಮದ್ಯದ ಬಾಟಲಿಗಳು ಬಿದ್ದಿರುತ್ತವೆ. ಇಲ್ಲಿರುವ 80 ಪಬ್‌ಗಳಲ್ಲಿ ನಿರಾಕ್ಷೇಪಣಾ ಪತ್ರ ಪಡೆದಿರುವುದು ಎರಡು ಪತ್ರಗಳು ಮಾತ್ರ. ಈ ನಿಯಮ ಉಲ್ಲಂಘನೆ ಬಗ್ಗೆ ಎಷ್ಟೇ ದೂರಿದರೂ ಸಂಬಂಧಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ.’

‘ಪಬ್‌ಗಳಲ್ಲಿ ರಾತ್ರಿ ಸಂಗೀತದ ಸದ್ದು 45 ಡೆಸಿಬಲ್‌ಗಿಂತ ಹೆಚ್ಚಿರಬಾರದು ಎಂಬ ನಿಯಮವೂ ಇದೆ. ಆದರೆ, ಈ ಪ್ರದೇಶದಲ್ಲಿ ಸಂಗೀತದ ಅಬ್ಬರ ಮಿತಿ ಮೀರಿರುತ್ತದೆ. ಈ ಎಲ್ಲ ಉಲ್ಲಂಘನೆಗಳ ವಿರುದ್ಧ ಇತ್ತೀಚೆಗೆ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದೇವೆ. ಆನಂತರ ಎಚ್ಚೆತ್ತುಕೊಂಡ ಅಗ್ನಿಶಾಮಕ ಇಲಾಖೆ, ಕೆಲ ಪಬ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.