ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವೈರಲ್ ಆಗಿದ್ದ ‘ನಿಖಿಲ್ ಎಲ್ಲಿದ್ದೀಯಪ್ಪಾ..’ ತಮಾಷೆಯರಾಜಕೀಯ ಘೋಷಣೆ ಬೆಂಗಳೂರು ವಿಶ್ವವಿಶ್ವವಿದ್ಯಾಲಯದ ಪದವಿ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲೂ ಪ್ರತಿಧ್ವನಿಸಿದೆ!
ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದ ಹಲವಾರು ಪ್ರಾಧ್ಯಾಪಕರಿಗೆ ವಿದ್ಯಾರ್ಥಿಗಳು ಬರೆದ ‘ನಿಖಿಲ್ ಎಲ್ಲಿದ್ದೀಯಪ್ಪಾ..’ ಉತ್ತರ ಕಂಡು ನಗುವಿಗಿಂತಲೂ ಹೆಚ್ಚಾಗಿ ಅಚ್ಚರಿ ಮತ್ತು ಆಘಾತ ಆಗಿದೆ.
ಕೆಲವು ವಿದ್ಯಾರ್ಥಿಗಳು ಈ ರಾಜಕೀಯ ಹೇಳಿಕೆಯನ್ನು ತಮ್ಮ ಉತ್ತರ ಪತ್ರಿಕೆಯ ಕೊನೆಯಲ್ಲಿ ಬರೆದಿದ್ದರೆ, ಕೆಲವರು ಉತ್ತರ ಪತ್ರಿಕೆಯ ಇಡೀ ಪುಟವನ್ನೇ ಇದಕ್ಕಾಗಿ ಬಳಸಿಕೊಂಡಿದ್ದಾರೆ.
‘ಉತ್ತರ ಪತ್ರಿಕೆಗಳಲ್ಲಿ ಪ್ರತಿ ವರ್ಷ ದೇವರಹೆಸರು ಬರೆಯುವುದು ಅಥವಾ ಧರ್ಮದ ಚಿಹ್ನೆ ಬಿಡಿಸುವುದನ್ನು ಕಾಣುವುದು ಸಾಮಾನ್ಯ. ಆದರೆ ಈ ಬಾರಿ ಜನಪ್ರಿಯ ರಾಜಕೀಯ ಘೋಷಣೆಯನ್ನೇ ಬರೆದುಬಿಟ್ಟಿದ್ದಾರೆ’ ಎಂದು ಮೌಲ್ಯಮಾಪಕರೊಬ್ಬರು ತಿಳಿಸಿದರು.
ಉತ್ತರ ಪತ್ರಿಕೆಗಳಲ್ಲಿ ಹೀಗೆ ಬರೆಯುವುದು ಪರೀಕ್ಷಾ ಅಕ್ರಮ ಎಂದೇ ಪರಿಗಣಿಸಲಾಗಿದೆ. ‘ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆಯ ಪ್ರಕಾರ, ಹೀಗೆ ಅನಗತ್ಯ ವಿಷಯಗಳನ್ನು ಬರೆಯುವವರನ್ನು ಮೂರು ವರ್ಷ ಪರೀಕ್ಷೆಗೆ ಹಾಜರಾಗುವುದರಿಂದ ಹೊರಗಿಡಬಹುದಾಗಿದೆ’ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದರು.
‘ಸಾಮಾನ್ಯವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳು ಇಂತಹ ಉತ್ತರ ಬರೆಯುವುದಿಲ್ಲ. ಪದವಿ ವಿದ್ಯಾರ್ಥಿಗಳಷ್ಟೇ ಇಂತಹ ಉತ್ತರ ಬರೆಯುತ್ತಾರೆ. ಪ್ರತಿ ಸೆಮಿಸ್ಟರ್‌ನಲ್ಲಿ ಇಂತಹ 40ರಷ್ಟು ಉತ್ತರ ಪತ್ರಿಕೆಗಳು ಸಿಗುತ್ತಿವೆ’ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.