ADVERTISEMENT

ನಿಮ್ಹಾನ್ಸ್: ಮಾನಸಿಕ ಆರೋಗ್ಯ ಸಂತೆ ಅ.15ಕ್ಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 14:39 IST
Last Updated 12 ಸೆಪ್ಟೆಂಬರ್ 2024, 14:39 IST
   

ಬೆಂಗಳೂರು: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಅಕ್ಟೋಬರ್‌ 15ರಂದು ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾನಸಿಕ ಆರೋಗ್ಯ ಸಂತೆ ಹಮ್ಮಿಕೊಂಡಿದೆ. 

ಬೆಳಿಗ್ಗೆ 10 ಗಂಟೆಯಿಂದ ನಡೆಯುವ ಮೂರನೇ ಆವೃತ್ತಿಯ ಈ ಸಂತೆಗೆ ಉಚಿತ ಪ್ರವೇಶ ಇರಲಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳ ಬಗೆಗಿನ ಕಳಂಕ ಹೋಗಲಾಡಿಸಿ, ರೋಗದ ಬಗ್ಗೆ ಅರಿವು ಮೂಡಿಸುವುದು ಈ ಸಂತೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.

‘ಇಂದಿಗೂ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಕೀಳಾಗಿ ಕಾಣುವುದು, ಅವರನ್ನು ನಿರ್ಲಕ್ಷ್ಯ ಮಾಡುವುದು ಕಾಣಬಹುದಾಗಿದೆ. ಜನರು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಅತಿ ಮುಖ್ಯ. ವಿವಿಧ ವಿಭಾಗಗಳಿಂದ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಜನರಲ್ಲಿ ಮಾನಸಿಕ ಆರೋಗ್ಯ ಸಾಕ್ಷರತೆಯನ್ನು ಹೆಚ್ಚಿಸಲು ಈ ಸಂತೆ ಆಯೋಜಿಸಲಾಗಿದೆ’ ಎಂದು ಹೇಳಿದೆ.

ADVERTISEMENT

‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಾರ, ದೇಶದಲ್ಲಿ 2022ರಲ್ಲಿ 1.70 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 2021ಕ್ಕೆ ಹೋಲಿಸಿದಲ್ಲಿ ಆತ್ಮಹತ್ಯೆ ಪ್ರಕರಣಗಳು ಶೇ 4.2 ರಷ್ಟು ಹೆಚ್ಚಳವಾಗಿವೆ. ಕೌಟುಂಬಿಕ ಸಮಸ್ಯೆಗಳು, ಅಸ್ವಸ್ಥತೆ, ವೃತ್ತಿಪರ ಸಮಸ್ಯೆ, ಮಾದಕ ಹಾಗೂ ಮದ್ಯ ವ್ಯಸನ, ದಿವಾಳಿತನ ಅಥವಾ ಸಾಲ, ನಿರುದ್ಯೋಗ ಸೇರಿ ವಿವಿಧ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗಿವೆ. ಮಾನಸಿಕ  ಆರೋಗ್ಯವು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರಗಳಲ್ಲಿ ಒಂದಾಗಿದೆ’ ಎಂದು ತಿಳಿಸಿದೆ. 

‘ಮಾನಸಿಕ ಆರೋಗ್ಯದ ಬಗೆಗಿನ ತಿಳಿವಳಿಕೆಯ ಕೊರತೆ ನಿವಾರಿಸಿ, ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಸಂತೆ ಸಹಕಾರಿಯಾಗಲಿದೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.