ADVERTISEMENT

ಮಾಜಿ ಯೋಧರೊಂದಿಗೆ ‘ಉರಿ’ ಚಿತ್ರ ವೀಕ್ಷಿಸಿದ ರಕ್ಷಣಾ ಸಚಿವೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 19:08 IST
Last Updated 27 ಜನವರಿ 2019, 19:08 IST
ನಿವೃತ್ತ ಸೇನಾಧಿಕಾರಿಗಳ ಜತೆ ಮಾತನಾಡುತ್ತಿರುವ ನಿರ್ಮಲಾ ಸೀತಾರಾಮನ್‌
ನಿವೃತ್ತ ಸೇನಾಧಿಕಾರಿಗಳ ಜತೆ ಮಾತನಾಡುತ್ತಿರುವ ನಿರ್ಮಲಾ ಸೀತಾರಾಮನ್‌   

ಬೆಂಗಳೂರು: ಪಾಕಿಸ್ತಾನದ ಭಯೋತ್ಪಾದಕ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಘಟನೆಯನ್ನು ಆಧರಿಸಿದ ಚಲನಚಿತ್ರ ‘ಉರಿ’ಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಮಾಜಿ ಯೋಧರು ಮತ್ತು ಸೇನಾಧಿಕಾರಿಗಳ ಜತೆಗೆ ವೀಕ್ಷಿಸಿದರು.

ಚಲನಚಿತ್ರ ವೀಕ್ಷಿಸಿ ಪುಳಕಿತರಾದ ನಿರ್ಮಲಾ ಚಲನಚಿತ್ರ ಅಭಿಮಾನಿಗಳ ಜತೆ ಸೇರಿ ‘ಹೌ ಈಸ್‌ ಜೋಷ್‌’ ಎಂದು ನಾಲ್ಕೈದು ಬಾರಿ ಘೋಷಣೆ ಹಾಕಿದರು. ಅಭಿಮಾನಿಗಳು ‘ಜೈಹಿಂದ್‌’ ಎಂದು ಸಂಭ್ರಮದಲ್ಲಿ ಪ್ರತಿಕ್ರಿಯಿಸಿದರು.

ನಿವೃತ್ತ ಯೋಧರು ಮತ್ತು ಸಮರ ಕಲಿಗಳ ಜತೆ ಕುಳಿತು ‘ಉರಿ’ ಸಿನಿಮಾ ನೋಡುವ ಪ್ರಯತ್ನವನ್ನು ನಗರದ ಕೆಲವು ಯುವಕರು ಇತ್ತೀಚೆಗೆ ಯಶವಂತಪುರದಲ್ಲಿ ನಡೆಸಿದ್ದರು. ಸುಮಾರು 15 ಮಾಜಿ ಯೋಧರನ್ನು ಕರೆಸಿ ಅವರ ಜತೆ ಸಿನಿಮಾ ನೋಡಿ ಅವರನ್ನು ಸನ್ಮಾನಿಸಲಾಗಿತ್ತು.

ADVERTISEMENT

ಇದರಿಂದ ಉತ್ತೇಜಿತಗೊಂಡ ಇನ್ನು ಕೆಲವು ಯುವಕರು ಬೆಳ್ಳಂದೂರಿನ ಸೆಂಟ್ರಲ್‌ ಸ್ಪಿರಿಟ್‌ ಮಾಲ್‌ನಲ್ಲಿ ಮಾಜಿ ಯೋಧರ ಜತೆ ‘ಉರಿ’ ಸಿನಿಮಾ ವೀಕ್ಷಿಸುವ ಕಾರ್ಯಕ್ರಮ ಭಾನುವಾರ ಹಮ್ಮಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡಲಾಗಿತ್ತು. ಯುವಕರು ಮತ್ತು ಮಾಜಿ ಯೋಧರಿಗಾಗಿ 48 ಟಿಕೆಟ್‌ಗಳನ್ನು ಬುಕ್‌ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ನಿರ್ಮಲಾ ಅವರು ಬೆಂಗಳೂರಿನಲ್ಲಿದ್ದರೆ ಚಿತ್ರ ವೀಕ್ಷಿಸಲು ಬರುವುದಾಗಿ ತಿಳಿಸಿದ್ದರು ಎಂದು ಈ ಆಂದೋಲನಕ್ಕೆ ಚಾಲನೆ ನೀಡಿದ ಕೆ.ಎಸ್‌.ಕಿರಣ್‌ ತಿಳಿಸಿದರು.

‘ಇವತ್ತು ಬೆಳಿಗ್ಗೆ ಟ್ವೀಟ್‌ ಮಾಡಿ, ‘ನಿಮ್ಮೊಂದಿಗೆ ಚಿತ್ರ ವೀಕ್ಷಿಸಲು ಬರುತ್ತೇನೆ’ ಎಂದು ಮಾಹಿತಿ ನೀಡಿದ್ದರು. ಅವರಿಗಾಗಿ ಟಿಕೆಟ್‌ ಕಾದಿರಿಸಿದೆವು. ಸೇನೆಯ ಹಿರಿಯ ಅಧಿಕಾರಿಗಳಾದ ಮಾಥುರ್‌ ಮತ್ತು ಶ್ರೀನಿವಾಸರಾವ್‌ ಅವರ ಪಕ್ಕದಲ್ಲಿ ಕುಳಿತು ಚಿತ್ರ ವೀಕ್ಷಿಸಿದರು. ಇದೊಂದು ಅತ್ಯುತ್ತಮ ಅನುಭವವಾಗಿತ್ತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.