ಬೆಂಗಳೂರು: ಮಲ್ಲೇಶ್ವರದ ರಾಜಾಶಂಕರ್ ಆಟದ ಮೈದಾನದಲ್ಲಿ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟ ಬಾಲಕ ನಿರಂಜನ್ (11) ಕಣ್ಣುಗಳನ್ನು ಪೋಷಕರು ದಾನ ಮಾಡಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರ ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಈ ವೇಳೆ ಮಾತನಾಡಿದ ಬಾಲಕನ ತಂದೆ ವಿಜಯ್ ಪವಾರ್, ‘ನನ್ನ ಮಗನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಬೇರೆ ಮಕ್ಕಳ ಬಾಳಿನಲ್ಲಿ ಬೆಳಕು ಬರಲಿ ಎಂಬ ಉದ್ದೇಶದಿಂದ ಕಣ್ಣುಗಳನ್ನು ದಾನ ಮಾಡಲಾಗಿದೆ. ಮಗನ ಸಾವು ನನಗೆ ಹಾಗೂ ಕುಟುಂಬಕ್ಕೆ ನೋವು ಉಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಮಲ್ಲೇಶ್ವರ ಪೈಪ್‌ಲೈನ್ ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ತಮಟೆ ಸದ್ದಿಗೆ ನಿರಂಜನ್ ತನ್ನ ಸ್ನೇಹಿತರ ಜತೆ ನೃತ್ಯ ಮಾಡಿದ್ದ ವಿಡಿಯೊವನ್ನು ಬಡಾವಣೆಯ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬಾಲಕನ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರ, ಬಿಬಿಎಂಪಿ ವತಿಯಿಂದ ₹5 ಲಕ್ಷ ಹಾಗೂ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.