ADVERTISEMENT

ಭಾರತವು 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರ: ನಿರ್ಮಲಾ ಸೀತಾರಾಮನ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 23:12 IST
Last Updated 24 ಮಾರ್ಚ್ 2024, 23:12 IST
   

ಬೆಂಗಳೂರು: ‘2008ರಲ್ಲಿ ಉಂಟಾದ ಆರ್ಥಿಕ ಹಿಂಜರಿತ ಕೆಲವೇ ದೇಶಕ್ಕೆ ಸೀಮಿತವಾಗಿತ್ತು. ಆದರೆ, ಕೋವಿಡ್ ಸಂಕಷ್ಟ ಭಾರತ ಸೇರಿದಂತೆ ಎಲ್ಲ ರಾಷ್ಟ್ರವನ್ನೂ ಬಾಧಿಸಿತು. ಈ ಸವಾಲು ಮೆಟ್ಟಿನಿಂತು ಭಾರತವು 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ’ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ನಗರದಲ್ಲಿ ಥಿಂಕರ್ಸ್‌ ಫೋರಂ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ದೇಶದ ಪ್ರಗತಿಗೆ ಬೆಂಗಳೂರು ಕೊಡುಗೆ ದೊಡ್ಡದಿದೆ. ಮೇಕ್‌ ಇನ್‌ ಇಂಡಿಯಾ ಭಾಗವಾಗಿ ಹಲವು ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನಲ್ಲಿ ಆರಂಭವಾಗಿವೆ. ಬೆಂಗಳೂರು ನಗರದಲ್ಲೇ 14.68 ಲಕ್ಷ ‘ಜನ್‌ಧನ್‌’ ಖಾತೆ ತೆರೆಯಲಾಗಿದೆ‘ ಎಂದು ಮಾಹಿತಿ ನೀಡಿದರು.

ADVERTISEMENT

‘ಜಲಜೀವನ್‌ ಮಿಷ್‌ನ ಯೋಜನೆ ಅಡಿ ಬೆಂಗಳೂರಿನಲ್ಲಿ 72,489 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ರಾಷ್ಟ್ರದಲ್ಲಿ ಒಟ್ಟು 11 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ 28,075 ಶೌಚಾಲಯ ಕಟ್ಟಲಾಗಿದೆ. ದೇಶದಲ್ಲಿ 11 ಸಾವಿರ ಹಾಗೂ ಬೆಂಗಳೂರಿನಲ್ಲಿ 323 ಜನಔಷಧಿ ಕೇಂದ್ರ ತೆರೆಯಲಾಗಿದೆ. ಜನಔಷಧಿ ಕೇಂದ್ರ ಸ್ಥಾಪನೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಈ ಕೇಂದ್ರಗಳಿಂದ ಬಡವರಿಗೆ ಹೆಚ್ಚು ಅನುಕೂಲವಾಗಿದೆ’ ಎಂದು ಕೇಂದ್ರದ ಹಲವು ಯೋಜನೆಗಳನ್ನು ಅಂಕಿ–ಸಂಖ್ಯೆ ಸಹಿತ ಸಚಿವರು ವಿವರಿಸಿದರು.

‘ಕಿಸಾನ್‌ ಸಮ್ಮಾನ್‌ ಯೋಜನೆ ಅಡಿ ದೇಶದಲ್ಲಿ 8.7 ಕೋಟಿ ರೈತರಿಗೆ ಮೂರು ಕಂತುಗಳಲ್ಲಿ ನೆರವು ನೀಡಲಾಗುತ್ತಿದೆ’ ಎಂದು ಹೇಳಿದರು.

ಅನುದಾನ ತಡೆಹಿಡಿದಿಲ್ಲ: ‘ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಅನುದಾನವನ್ನೂ ಕೇಂದ್ರ ಸರ್ಕಾರ ತಡೆಹಿಡಿದಿಲ್ಲ. ಸಕಾಲದಲ್ಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಯು‍ಪಿಎ ಸರ್ಕಾರದ ಆಡಳಿತಕ್ಕೆ ಹೋಲಿಸಿದರೆ ರಾಜ್ಯಗಳಿಗೆ ನೀಡಲಾಗುತ್ತಿರುವ ತೆರಿಗೆ ಪಾಲು ಹಾಗೂ ಅನುದಾನವನ್ನು ಬಿಜೆಪಿ ಸರ್ಕಾರ ಹೆಚ್ಚಿಸಿದೆ’ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು

‘2004ರಿಂದ 2014ರ
ಯು‍‍ಪಿಎ ಆಡಳಿತದ ಅವಧಿಯಲ್ಲಿ ಕರ್ನಾಟಕಕ್ಕೆ ₹81,795 ಕೋಟಿ ಅನುದಾನ ಸಿಕ್ಕಿತ್ತು. ಅದೇ ಬಿಜೆಪಿ ಅವಧಿಯಲ್ಲಿ ₹2,93,226
ಕೋಟಿ ಲಭಿಸಿದೆ. ಕರ್ನಾಟಕಕ್ಕೆ ಮುಂಗಡವಾಗಿ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಅನುದಾನ ಬಿಡುಗಡೆ ಮಾಡಿರುವುದಕ್ಕೆ ದಾಖಲೆಗಳಿವೆ. ಆದರೆ, ಕಾಂಗ್ರೆಸ್‌ ನೇತೃತ್ವದ
ಕರ್ನಾಟಕ ಸರ್ಕಾರ, ಸುಳ್ಳು ಆರೋಪ ಮಾಡುತ್ತಿದೆ. ರಾಜ್ಯದ ಜನರನ್ನು ಕಾಂಗ್ರೆಸ್‌ ದಿಕ್ಕು ತಪ್ಪಿಸುತ್ತಿದೆ’ ಎಂದು ಕಿಡಿಕಾರಿದರು.

‘₹5,495 ಕೋಟಿ ವಿಶೇಷ ಅನುದಾನ ಸಹ ನೀಡಿಲ್ಲ’ ಎಂದೂ ರಾಜ್ಯ ಸರ್ಕಾರ ಆರೋಪ ಹೊರಿಸಿದೆ. ಈ ರೀತಿಯ ಅನುದಾನ ನೀಡುವಂತೆ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಯಾವುದೇ ಪ್ರಸ್ತಾಪ ಇರಲಿಲ್ಲ’ ಎಂದು ಹೇಳಿದರು.

‘ಜಿಎಸ್‌ಟಿಯಿಂದ ನಿಮಗೇ ಲಾಭ’

‘2017ರಿಂದ 2024ರ ಮಾರ್ಚ್‌ 1ರ ವರೆಗೆ ಜಿಎಸ್‌ಟಿ ಪರಿಹಾರದ ಸಂಪೂರ್ಣ ಪಾಲನ್ನು ಕರ್ನಾಟಕ ಪಡೆದುಕೊಂಡಿದೆ. ಜಿಎಸ್‌ಟಿ ಪೂರ್ವದ ಬೆಳವಣಿಗೆಯ ದರ ಕೇವಲ ಶೇ 11.68ರಷ್ಟಿತ್ತು. ಇಂದು ಅದು ಶೇ 15ಕ್ಕೆ ತಲುಪುತ್ತಿರುವುದರಿಂದ ಅದನ್ನು ಒಪ್ಪಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ಅಂಕಿಅಂಶಗಳನ್ನು ಉತ್ಪ್ರೇಕ್ಷೆ ಎಂದು ಆರೋಪಿಸುತ್ತಿದ್ದಾರೆ. ಜಿಎಸ್‌ಟಿಯಿಂದ ನಿಮಗೆ ಲಾಭವಾಗುತ್ತಿದೆ ಎಂದು ರಾಜ್ಯ ಸರ್ಕಾರಕ್ಕೆ ನಾನು ಹೇಳಲು ಬಯಸುತ್ತೇನೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಅನುದಾನ ಪಡೆಯಲು ಹೋರಾಟ: ಸುರೇಶ್‌

ರಾಜರಾಜೇಶ್ವರಿನಗರ: ‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಅನುದಾನ, ಸವಲತ್ತು ಪಡೆಯಲು ನಿರಂತರ ಹೋರಾಟ ನಡೆಸುತ್ತೇನೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಹೇಳಿದರು.

ವಿವಿಧೆಡೆ ಮತಯಾಚನೆ ಮಾಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಯುವ ಜನಾಂಗಕ್ಕೆ ಸಿಗಬೇಕಾದ ಉದ್ಯೋಗಗಳು ಗುಜರಾತ್, ಉತ್ತರ ಪ್ರದೇಶದ ಪಾಲಾಗುತ್ತಿವೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ರಾಜ್ಯದ ಜನತೆ, ಪೋಷಕರು ದೊಡ್ಡ ಮಟ್ಟದಲ್ಲಿ ಗಟ್ಟಿಧ್ವನಿ ಎತ್ತಬೇಕು ಎಂದು ಹೇಳಿದರು.

‘ಎಂತಹ ಸಮಸ್ಯೆ ಎದುರಾದರೂ ಮೇಕೆದಾಟು ಯೋಜನೆ ಪ್ರಾರಂಭ ಮಾಡಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕೊಡಿಸಿಯೇ ತೀರುತ್ತೇನೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು, ನಮ್ಮ ತೆರಿಗೆ ಹಣ ತರಲು, ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡಿ ತೋರಿಸುತ್ತೇನೆ’ ಎಂದರು.

ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ರವಿ, ಪಾಲಿಕೆ ಮಾಜಿ ಸದಸ್ಯರಾದ ವೇಲು ನಾಯಕ್, ಬಿ.ಆರ್.ನಂಜುಂಡಪ್ಪ, ಶ್ರೀನಿವಾಸ ಮೂರ್ತಿ(ಜಾನಿ), ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲ್ ಕೃಷ್ಣ, ಕೆಪಿಸಿಸಿ ಸದಸ್ಯ ಎಸ್.ಬೆಟ್ಟಸ್ವಾಮಿಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.