ಬೆಂಗಳೂರು: ‘ದೇಶದ ರಾಜಕಾರಣದಲ್ಲಿ ಅನಂತಕುಮಾರ್ ಅವರ ಕೊರತೆ ಎದ್ದು ಕಾಣುತ್ತಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ದಿವಂಗತ ಅನಂತಕುಮಾರ್ ಅವರ 3ನೇ ಪುಣ್ಯತಿಥಿ ಸ್ಮರಣಾರ್ಥ ಆಯೋಜಿಸಿದ್ದ ಅನಂತಕುಮಾರ್ ಸ್ಮಾರಕ ಉಪನ್ಯಾಸದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು. ‘ದಕ್ಷಿಣ ಭಾರತದಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ಅನಂತಕುಮಾರ್ ಕೊಡುಗೆ ನೀಡಿದ್ದರು’ ಎಂದು ನೆನಪಿಸಿಕೊಂಡರು.
‘ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರ ಜತೆ ಸೇರಿ ಪ್ರಾರಂಭಿಸಿದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಲಕ್ಷಾಂತರ ಮಕ್ಕಳ ಹಸಿವು ನೀಗಿಸುತ್ತಿದೆ. ಅನಂತಕುಮಾರ್ ಅವರ ಬಹು ದಿನಗಳ ಕನಸಾಗಿದ್ದ ಬೆಂಗಳೂರು ರಿಂಗ್ ರಸ್ತೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಬೆಂಗಳೂರಿಗೆ ಬಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪಿ.ವಿ. ಕೃಷ್ಣ ಭಟ್, ಅನಂತಕುಮಾರ್ ಪುತ್ರಿ ಐಶ್ವರ್ಯಾ ಮತ್ತು ವಿಜೇತಾ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಎಚ್.ಎನ್. ನಂದಕುಮಾರ್, ಪ್ರದೀಪ್ ಓಕ್ ಇದ್ದರು.
ಎಲೆಕ್ಟ್ರಿಕ್ ವಾಹನ 5 ವರ್ಷದಲ್ಲಿ ಸಾಧನೆ
‘ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆ ಗಮನಿಸಿದರೆ ಮುಂದಿನ 5 ವರ್ಷಗಳಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ’ ಎಂದು ನಿತಿನ್ ಗಡ್ಕರಿ ಹೇಳಿದರು.
‘ದೇಶದಲ್ಲಿ ಹಸಿರು ಆರ್ಥಿಕತೆಯನ್ನು ವೇಗವಾಗಿ ಅಭಿವೃದ್ದಿಗೊಳಿಸಲಾಗುತ್ತಿದೆ. ಬೆಂಗಳೂರಿನ ನವೋದ್ಯಮಗಳು ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡಿವೆ. ಇಥೆನಾಲ್ ಉತ್ಪಾದನೆ, ಫ್ಲೆಕ್ಸ್ ಎಂಜಿನ್, ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಯಲ್ಲಿ ಸಂಶೋಧನೆ ನಡೆಯುತ್ತಿವೆ. ಈ ಸಂಶೋಧನೆಗಳಲ್ಲಿ ಬೆಂಗಳೂರು ನಗರದ ಕೊಡುಗೆ ಹೆಚ್ಚಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.