ADVERTISEMENT

ವೈದ್ಯರ ಸಮಸ್ಯೆ ಇತ್ಯರ್ಥಕ್ಕೆ ಎನ್‌ಎಂಸಿ ಸೂಚನೆ

ಪದವಿ ಪ್ರಮಾಣ ಪತ್ರ ಬಾಕಿ, ನೋಂದಣಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 16:38 IST
Last Updated 7 ನವೆಂಬರ್ 2021, 16:38 IST

ಬೆಂಗಳೂರು: ಇದೇ ಆಗಸ್ಟ್‌ನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ ಪೂರೈಸಿರುವ ತಜ್ಞ ವೈದ್ಯರಿಗೆ ಪದವಿ ಪ್ರಮಾಣಪತ್ರ ವಿತರಣೆ ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ಯಲ್ಲಿ ನೋಂದಣಿಗೆ ಇರುವ ತೊಡಕುಗಳನ್ನು ಪರಿಹರಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿದೆ.

ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜಿಸುವ ಪ್ರಕ್ರಿಯೆಯಲ್ಲಿನ ಲೋಪಗಳಿಂದಾಗಿ ತಾವು ಸೇವೆ ಆರಂಭಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಈ ವರ್ಷ ರಾಜ್ಯದಲ್ಲಿ ಕೋರ್ಸ್‌ ಪೂರ್ಣಗೊಳಿಸಿರುವ ಹಲವು ವೈದ್ಯರು ಪ್ರಧಾನಿ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು. ಕಡ್ಡಾಯ ಸರ್ಕಾರಿ ಸೇವೆ ಕಾರಣ ನೀಡಿ ತಮ್ಮ ಪದವಿ ಪ್ರಮಾಣಪತ್ರಗಳ ವಿತರಣೆ ತಡೆಹಿಡಿದಿದ್ದು, ಕೆಎಂಸಿ ನೋಂದಣಿಗೂ ನಿರ್ಬಂಧ ಹೇರಲಾಗಿದೆ ಎಂದು ದೂರಿದ್ದರು.

ದೂರುಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ರವಾನಿಸಿದ್ದ ಪ್ರಧಾನಿ ಸಚಿವಾಲಯ, ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಅವರಿಗೆ ಶನಿವಾರ ನೋಟಿಸ್‌ ಜಾರಿಗೊಳಿಸಿರುವ ಆಯೋಗ, ವೈದ್ಯರ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಂಡು, ವರದಿ ಸಲ್ಲಿಸುವಂತೆ ಸೂಚಿಸಿದೆ.

ADVERTISEMENT

‘ಕರ್ನಾಟಕದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 2018ರಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದು, 2021ರ ಆಗಸ್ಟ್‌ನಲ್ಲಿ ಕೋರ್ಸ್‌ ಪೂರ್ಣಗೊಳಿಸಿರುವ ಹಲವು ಅಭ್ಯರ್ಥಿಗಳಿಂದ ದೂರುಗಳು ಬಂದಿವೆ. ಕಡ್ಡಾಯ ಸೇವೆಗೆ ಸಿದ್ಧರಿದ್ದರೂ ಸೂಕ್ತ ಹುದ್ದೆ ನೀಡುತ್ತಿಲ್ಲ. ಅಲ್ಲದೇ, ತಮ್ಮ ಪದವಿ ಪ್ರಮಾಣಪತ್ರ ವಿತರಿಸಿ, ಕೆಎಂಸಿ ನೋಂದಣಿಗೂ ಅವಕಾಶ ಕಲ್ಪಿಸಿಲ್ಲ ಎಂದು ದೂರಿದ್ದಾರೆ. ಮೂಲ ದಾಖಲೆಗಳನ್ನೂ ವಶದಲ್ಲಿರಿಸಿಕೊಂಡಿರುವ ಕುರಿತು ದೂರುಗಳು ಬಂದಿವೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಿರುವ ತಜ್ಞ ವೈದ್ಯರಿಗೆ ಪ್ರಮಾಣಪತ್ರ ವಿತರಿಸಿದ್ದು, ಅವರೆಲ್ಲರೂ ವೃತ್ತಿ ಆರಂಭಿಸಲು ಅವಕಾಶ ನೀಡಲಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡಿವದರಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ ಎಂಬ ದೂರುಗಳಿವೆ. ಈ ಎಲ್ಲ ದೂರುಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.