ADVERTISEMENT

ಬೆಂಗಳೂರು | ರಸ್ತೆ ಮೇಲೆ ವ್ಯಾಪಾರಕ್ಕೆ ಅವಕಾಶ ಇಲ್ಲ: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 23:39 IST
Last Updated 12 ನವೆಂಬರ್ 2024, 23:39 IST
<div class="paragraphs"><p>ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌</p></div>

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

   

ಬೆಂಗಳೂರು: ರಸ್ತೆ ಮೇಲೆ ವ್ಯಾಪಾರ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಯುತ್ತಿದ್ದು, ಅದು ಮುಗಿಯುವವರೆಗೆ, ಪಾದಚಾರಿ ಮಾರ್ಗದ ಚಿಕ್ಕ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ದಕ್ಷಿಣ ವಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಮುಖ್ಯ ಆಯುಕ್ತರ ನಡೆ, ವಲಯದ ಕಡೆ’ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾದಚಾರಿ ಮಾರ್ಗದಲ್ಲಿ ಕಾಯಂ ನಿರ್ಮಾಣ ಮಾಡಿ ಅಥವಾ ‍ಪೂರ್ಣ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ. 5 ಅಡಿ x 5 ಅಡಿ ಜಾಗದಲ್ಲಿ ವ್ಯಾಪಾರ ಮಾಡಿಕೊಳ್ಳಬಹುದು’ ಎಂದರು.

ADVERTISEMENT

ಜಯನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಿದರೂ ಮತ್ತೆ ಒತ್ತುವರಿಯಾಗುತ್ತಿದೆ. ಇದಕ್ಕೆ ಶಾಶ್ವತ ಕ್ರಮ ಕೈಗೊಳ್ಳಲು ಸಮೀಕ್ಷೆ ನಡೆಸಲಾಗುತ್ತದೆ. ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

50 ದೂರು: 40ಕ್ಕೂ ಹೆಚ್ಚು ಸಾರ್ವಜನಿಕರಿಂದ 50ಕ್ಕೂ ಹೆಚ್ಚು ಕುಂದು-ಕೊರತೆಗಳನ್ನು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆಲಿಸಿದರು.

ಜಯನಗರದ ಮಾಧವನ್ ಉದ್ಯಾನ ವೃತ್ತದ ಬಳಿ ಚರಂಡಿ ಹೂಳೆತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ತುಷಾರ್‌ ಗಿರಿನಾಥ್, ‘ಪ್ರಮುಖ ರಸ್ತೆಗಳ ಚರಂಡಿ ಸ್ವಚ್ಛತೆಗೆ ಪ್ರತ್ಯೇಕ ಅನುದಾನ ಮೀಸಲಿಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಖಾಲಿ ಜಾಗದ ಮಾಲೀಕರಿಗೆ ಕೂಡಲೇ ನೋಟೀಸ್ ಜಾರಿ ಮಾಡಿ ಸ್ವಚ್ಛಗೊಳಿಸಲು ಸೂಚಿಸಬೇಕು. ಅವರು ಮಾಡದಿದ್ದರೆ ಪಾಲಿಕೆಯೇ ಸ್ವಚ್ಛಗೊಳಿಸಿ, ವೆಚ್ಚ ವಸೂಲಿ ಮಾಡಬೇಕು’ ಎಂದು ಪುನರುಚ್ಚರಿಸಿದರು.

ಬಸವನಗುಡಿ, ಚಿಕ್ಕಪೇಟೆಯಲ್ಲಿ ಅಪಾಯಕಾರಿ ಮರಗಳ ತೆರವು, ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್‌ ಬಳಕೆ, ಸುಂಕೇನಹಳ್ಳಿಯಲ್ಲಿ ಬೀದಿದೀಪ ಅಳವಡಿಕೆ, ವಿಜಯನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು, ಕಾರ್ಡ್‌ ರಸ್ತೆ ಜಂಕ್ಷನ್‌ನಲ್ಲಿ ಅಂಬೇಡ್ಕರ್‌ ಪ್ರತಿಮೆ ಅನಾವರಣ, ಬನಶಂಕರಿ ದೇವಸ್ಥಾನ ರಸ್ತೆಯ ಎರಡೂ ಬದಿಗಳಲ್ಲಿರುವ ನಾಮಫಲಕಗಳಲ್ಲಿ ತಪ್ಪಾದ ಕನ್ನಡ ಪದ ಬಳಕೆ, ಅತ್ತಿಗುಪ್ಪೆಯಲ್ಲಿ ರುದ್ರಭೂಮಿ ಸ್ವಚ್ಛತೆಗೆ ಸಂಬಂಧಿಸಿದ ದೂರುಗಳಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ದಕ್ಷಿಣ ವಲಯ ಆಯುಕ್ತೆ ವಿನೋತ್ ಪ್ರಿಯಾ, ಜಂಟಿ ಆಯುಕ್ತ ಶಿವಕುಮಾರ್, ಉಪ ಆಯುಕ್ತ ಡಿ.ಕೆ ಬಾಬು, ಮುಖ್ಯ ಎಂಜಿನಿಯರ್ ರಾಜೇಶ್‌ ಉಪಸ್ಥಿತರಿದ್ದರು.

‘ಎರಡು ವರ್ಷದ ಹಿಂದಿನ ದೂರುಗಳಿಗೇ ಪರಿಹಾರ ಸಿಕ್ಕಿಲ್ಲ’
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು 2022ರ ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆಸಿದ್ದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ನೀಡಲಾಗಿದ್ದ ದೂರಿಗೇ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಅದೇ ಕಾರ್ಯಕ್ರಮದಲ್ಲೇ ಅದೇ ದೂರನ್ನು ನೀಡಬೇಕಾಗಿದೆ ಎಂಬ ಆರೋಪಿಸಲಾಗಿದೆ. ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ 2022ರ ಆಗಸ್ಟ್‌ 12ರಂದು  ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ‘ಲಿಂಗಧೀರನಹಳ್ಳಿಯಲ್ಲಿರುವ ತ್ಯಾಜ್ಯ ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಆಗುತ್ತಿದೆ. ಅದನ್ನು ನಿಲ್ಲಿಸಬೇಕು’ ಎಂದು ನಾಗರಿಕರು ಆಗ್ರಹಿಸಿದ್ದರು. ‘ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ವಾಸನೆ ಬರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತುಷಾರ್‌ ಗಿರಿನಾಥ್‌ ಭರವಸೆ ನೀಡಿದ್ದರು. ಆದರೆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಶಶಿಕುಮಾರ್‌ ಹೇಳಿದರು. ರಸ್ತೆ ಚರಂಡಿ ರಾಜಕಾಲುವೆಯಲ್ಲಿ ಹೂಳೆತ್ತಬೇಕು ಎಂದು ಜಯಣ್ಣ ಬಡಾವಣೆಯ ಟಿ.ಇ. ಶ್ರೀನಿವಾಸ್‌ ದೂರಿದ್ದರು. ಖಾಲಿ ನಿವೇಶನದಲ್ಲಿ ಕಸ ಗಿಡಮರಗಳು ಬೆಳೆದು ಸಮಸ್ಯೆ ಉಂಟಾಗಿದೆ ಎಂದು ಹಲವರು ಹೇಳಿದ್ದರು. ‘ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು. ಚರಂಡಿಗಳಲ್ಲಿ ಹೂಳೆತ್ತಬೇಕು’ ಎಂದು ತುಷಾರ್‌ ಗಿರಿನಾಥ್‌ ಎರಡು ವರ್ಷದ ಹಿಂದೆ ಆದೇಶಿಸಿದ್ದರೂ ಅದು ಪಾಲನೆಯಾಗಿಲ್ಲ ದೂರುದಾರ ನಿವಾಸಿಗಳು ಹೇಳಿದರು. ‘2022ರ ಜುಲೈ 12ರಂದು ಪಾದಚಾರಿ ಮಾರ್ಗದ ಒತ್ತುವರಿ ತೆರವಿನ ಬಗ್ಗೆಯೂ ಹೇಳಿದ್ದನ್ನೇ ಮುಖ್ಯ ಆಯುಕ್ತರು ಇಂದೂ ಹೇಳುತ್ತಿದ್ದಾರೆ’ ಎಂದು ಜಯನಗರದ ನಾಗರಾಜ್‌ ದೂರಿದರು. 2022ರಲ್ಲಿ ನಡೆದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಎಷ್ಟು ದೂರುಗಳು ಸಲ್ಲಿಕೆಯಾದವು ಯಾವ ಪರಿಹಾರ ನೀಡಲಾಗಿದೆ ಎಂಬ ಮಾಹಿತಿಯನ್ನೂ ಮುಖ್ಯ ಆಯುಕ್ತ ಕಚೇರಿ ಅಧಿಕಾರಿಗಳು ಹೊಂದಿಲ್ಲ.
ಅಕ್ರಮ ಕಟ್ಟಡ: ಅಧಿಕಾರಿಗಳಿಗೆ ತರಾಟೆ
ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಾಣವಾಗಿರುವ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿರುವ ದಕ್ಷಿಣ ವಲಯ ಆಯುಕ್ತ ಮುಖ್ಯ ಎಂಜಿನಿಯರ್ ಸೇರಿದಂತೆ ಎಲ್ಲ ಸಂಬಂಧಿಸಿದ ಅಧಿಕಾರಿಗಳನ್ನು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತರಾಟೆಗೆ ತೆಗೆದುಕೊಂಡರು. ‘ಅಕ್ರಮ ಕಟ್ಟಡ ನಿರ್ಮಾಣ ನಡೆಯುತ್ತಿದೆ. ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಅಧಿಕಾರಿಗಳ ಸಭೆಗೆ ಮುನ್ನ ಕೆಲವರು ದೂರಿದರು. ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ ಮುಖ್ಯ ಆಯುಕ್ತರು ‘ಅಕ್ರಮ ಕಟ್ಟಡಗಳ ತೆರವಿಗೆ ಆದೇಶವಾಗಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ವಲಯ ಆಯುಕ್ತರಿಗೆ ಎಲ್ಲ ಅಧಿಕಾರ ನೀಡಲಾಗಿದೆಯಲ್ಲವೇ’ ಎಂದು ಪ್ರಶ್ನಿಸಿದರು. ಉತ್ತರ ನೀಡದ ಅಧಿಕಾರಿಗಳಿಗೆ ‘ಇಂದಿನಿಂದಲೇ ಕ್ರಮವಾಗಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.