ADVERTISEMENT

ವಿನಯ ಕುಲಕರ್ಣಿ ಜತೆ ಮನಸ್ತಾಪ ಇಲ್ಲ: ಸಚಿವ ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:22 IST
Last Updated 28 ಜೂನ್ 2024, 16:22 IST
ಬೈರತಿ ಸುರೇಶ್‌ 
ಬೈರತಿ ಸುರೇಶ್‌    

ಬೆಂಗಳೂರು: ‘ಶಾಸಕ ವಿನಯ ಕುಲಕರ್ಣಿ ಜತೆ ನನಗೆ ಮನಸ್ತಾಪ ಇಲ್ಲ. ನಾವು ಜಗಳವನ್ನೂ ಆಡಿಕೊಂಡಿಲ್ಲ. ಹೀಗಾಗಿ ಸಂಧಾನದ ಪ್ರಶ್ನೆ ಉದ್ಭವಿಸುವುದೇ ಇಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

ತಮ್ಮ ವಿರುದ್ಧ ವಿನಯ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ ಎಂಬ ಸುದ್ದಿ ಕುರಿತು ಪತ್ರಕರ್ತರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಸಚಿವರು, ‘ಅವರು ನನ್ನ ಸ್ನೇಹಿತರು. ನನ್ನ ಇಲಾಖೆಯ ಅಧೀನದ ನೀರು ಪೂರೈಕೆ ನಿಗಮದ ಅಧ್ಯಕ್ಷರಾಗಿದ್ದಾರೆ. ನನ್ನ ವಿರುದ್ಧ ದೂರು ಕೊಟ್ಟಿದ್ದರೆ ಅದರ ಪ್ರತಿ ಕೊಡಿ. ಆ ಬಳಿಕ ನಾನು ಮಾತನಾಡುತ್ತೇನೆ’ ಎಂದರು.

ಶಾಸಕರ ಬೆಂಬಲಿಗರ ಗುತ್ತಿಗೆದಾರರನ್ನು ಸಚಿವರು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ಯಾರೇ ಕಳ್ಳರಿದ್ದರೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇನೆ. ಈವರೆಗೆ ಯಾರನ್ನೂ ಕಪ್ಪು ಪಟ್ಟಿಗೆ ಸೇರಿಸಿಲ್ಲ. ನಿಮ್ಮ ಬಳಿ ಮಾಹಿತಿ ಇದ್ದರೆ ಕೊಡಿ. ನಾಳೆಯೇ ಆ ಕೆಲಸ ಮಾಡುತ್ತೇನೆ. ತಪ್ಪು ಮಾಡಿದವರನ್ನು ಜೈಲಿಗೂ ಕಳಿಸುವೆ. ಯಾವುದೇ ಹಿಂಜರಿಕೆಯೂ ಇಲ್ಲ’ ಎಂದು ಹೇಳಿದರು.

ADVERTISEMENT

‘ಟೆಂಡರ್‌ ಅನುಮೋದನೆ ವಿಚಾರದಲ್ಲಿ ಮುಖ್ಯಮಂತ್ರಿ, ಮಂತ್ರಿಗಳಿಗೆ ಕೂಡ ಅಧಿಕಾರ ಇಲ್ಲ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ದರ್ಜೆಯ ಅಧಿಕಾರಿಗಳಿರುವ ಉನ್ನತ ಮಟ್ಟದ ಸಮಿತಿ ಎಲ್ಲವನ್ನೂ ನಿರ್ಧರಿಸುತ್ತದೆ. ರಾಜಕಾರಣಿಗಳಿಗೆ ಯಾವ ಅಧಿಕಾರವೂ ಇಲ್ಲ. ನಾನು ಯಾವುದೇ ಸೂಚನೆ ನೀಡಿಲ್ಲ’ ಎಂದರು.

‘ವಿನಯ ಅವರೇ ನಿಗಮದ ಆಡಳಿತ ಮಂಡಳಿ ಅಧ್ಯಕ್ಷರಿದ್ದಾರೆ. ಮಂಡಳಿಗೆ ಸೂಚನೆ ನೀಡುವ ಅಧಿಕಾರ ನನಗೂ ಇಲ್ಲ, ಅವರಿಗೂ ಇಲ್ಲ. ಎಲ್ಲವನ್ನೂ ಅಧಿಕಾರಿಗಳು ಮಾಡುತ್ತಾರೆ. ಯಾವುದೇ ತಪ್ಪುಗಳಾಗಿದ್ದರೆ ಸಚಿವನಾಗಿ ಸರಿಪಡಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.