ಬೆಂಗಳೂರು: ‘ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ ವ್ಯಕ್ತಿ ವಿಮೆ ವರ್ಗಾವಣೆ ಆಗುವ ಮುನ್ನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕರಣವೊಂದರಲ್ಲಿ ಮೃತನ ಕುಟುಂಬದ ಸದಸ್ಯರಿಗೆ ವಿಮಾ ಪರಿಹಾರ ನೀಡಲು ಸಾಧ್ಯವಿಲ್ಲ' ಎಂದು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ಹೇಳಿದೆ.
ಈ ಕುರಿತಂತೆ ಮೃತ ಬೈಕ್ ಮಾಲಿಕನ ಪತ್ನಿ ಹಾಗೂ ಪುತ್ರ ವಿಮಾ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಅರ್ಜಿಯನ್ನುಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ವಜಾಗೊಳಿಸಿದೆ.
‘ಮೃತ ವ್ಯಕ್ತಿ ಅರುಣ್ ಮತ್ತು ನ್ಯಾಷನಲ್ ಇನ್ಶ್ಯೂರೆನ್ಸ್ ಕಂಪನಿ ನಡುವೆ ಯಾವುದೇ ಒಪ್ಪಂದವಿರಲಿಲ್ಲ. ಮೇಲಾಗಿ, ಸಂತ್ರಸ್ತರು ಸಂಸ್ಥೆಗೆ ಯಾವುದೇ ಪ್ರೀಮಿಯಂ ಪಾವತಿಸಿರಲಿಲ್ಲ. ಆದ್ದರಿಂದ, ಅರ್ಜಿದಾರರನ್ನು ಇಲ್ಲಿ ಗ್ರಾಹಕರು ಎಂದು ಪರಿಗಣಿಸಲು ಬರುವುದಿಲ್ಲ’ ಎಂದು 2021ರ ಅಕ್ಟೋಬರ್ 21 ರಂದು ನೀಡಲಾಗಿರುವ ತೀರ್ಪಿನಲ್ಲಿ ತಿಳಿಸಲಾಗಿದೆ.
‘ಅಪಘಾತ ನಡೆದ ಸಮಯದಲ್ಲಿ ವಾಹನದ ವಿಮೆ ಮಾಲಿಕನ ಹೆಸರಲ್ಲಿ ಇರಲಿಲ್ಲ. ಬದಲಿಗೆ ಮೂಲ ಮಾಲೀಕರ ಹೆಸರಿನಲ್ಲಿತ್ತು. ಹೀಗಾಗಿ ಮೃತನ ಕುಟುಂಬಸ್ಥರು ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪರಿಹಾರ ಕೋರಲು ಸಾಧ್ಯವಿಲ್ಲ. ಬೇಕಾದರೆ, ಸಂತ್ರಸ್ತ ಕುಟುಂಬವು ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ ಎದುರು ಅರ್ಜಿ ಸಲ್ಲಿಸಬಹುದು’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.