ADVERTISEMENT

ಖಾಸಗಿ ತೆಕ್ಕೆಗೆ ಕೆರೆ ಮಿಥ್ಯಾರೋಪ: ಹೈಕೋರ್ಟ್‌ಗೆ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 23:15 IST
Last Updated 12 ನವೆಂಬರ್ 2024, 23:15 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜಧಾನಿಯಲ್ಲಿ ಸದ್ಯ ಅಸ್ತಿತ್ವದಲ್ಲಿರುವ 185 ಕೆರೆಗಳ ನಿರ್ವಹಣೆಗೆ ವರ್ಷಕ್ಕೆ ₹650 ಕೋಟಿ ಬೇಕು. ಅದಕ್ಕಾಗಿ ಖಾಸಗಿ ಸಂಸ್ಥೆಗಳಿಂದ ನೆರವು ಪಡೆದುಕೊಳ್ಳಲಾಗುತ್ತಿದೆಯೇ ಹೊರತು ಅವುಗಳನ್ನು ಖಾಸಗಿಯವರ ತೆಕ್ಕೆಗೇ ಒಪ್ಪಿಸುವುದಿಲ್ಲ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಕೆ (ಬಿಬಿಎಂಪಿ) ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

‘ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅವುಗಳನ್ನು ರಕ್ಷಿಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು’ ಎಂದು ಕೋರಿ 2014ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ, ನಗರದ ಎಲ್ಲಾ ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಖಾಸಗಿ ಸಂಸ್ಥೆಗಳ ಮಡಿಲಿಗೆ ಹಾಕಲಾಗಿದೆ. ಈ ನಿಟ್ಟಿನಲ್ಲಿ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ. ಈ ಕ್ರಮ ಆತಂಕಕಾರಿಯಾಗಿದೆ. ಅರ್ಜಿದಾರರಿಗೆ ಇದರಲ್ಲಿ ಯಾವುದೇ ಸ್ವಹಿತಾಸಕ್ತಿ ಇಲ್ಲ. ಕೇವಲ ಸಾರ್ವಜನಿಕ ಸ್ವತ್ತಿನ ಉಳಿವಿನ ಕಾಳಜಿ ಮಾತ್ರವೇ ಅಡಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಕೆರೆಗಳನ್ನು ಉಳಿಸಬೇಕು, ರಕ್ಷಿಸಬೇಕು ಎನ್ನುವುದೇ ನಮ್ಮ ಉದ್ದೇಶ. ಹಣ ಖರ್ಚಾಗುತ್ತದೆ ಎಂದು ಕೆರೆಗಳನ್ನು ಸಂಪೂರ್ಣವಾಗಿ ಖಾಸಗಿಯವರ ಸುಪರ್ದಿಗೆ ನೀಡುವುದು ಅಪಾಯಕಾರಿ. ಹೀಗಾದರೆ ಬಿಬಿಎಂಪಿ ಮತ್ತು ಸರ್ಕಾರದ ಜವಾಬ್ದಾರಿಯಾದರೂ ಏನು’ ಎಂದು ಪ್ರಶ್ನಿಸಿದರು.

‘ನಿರ್ವಹಣೆಗೆ ಖಾಸಗಿ ಸಂಸ್ಥೆಗಳಿಂದ ಹಣ ಪಡೆದುಕೊಳ್ಳಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ನಿರ್ವಹಣೆಯನ್ನೆಲ್ಲಾ ಖಾಸಗಿಯವರಿಗೇ ನೀಡಿದರೆ ಅದು ಮಾರಕವಾದ ಕ್ರಮವಾಗುತ್ತದೆ. ಬಹಳ ಮುಖ್ಯವಾಗಿ, ಸರ್ಕಾರದ ಈ ನೀತಿ 2020ರ ಹೈಕೋರ್ಟ್ ಆದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ’ ಎಂದು ಬಲವಾಗಿ ಆಕ್ಷೇಪಿಸಿದರು.

ಅರ್ಜಿದಾರರ ವಾದವನ್ನು ಅಷ್ಟೇ ಬಲವಾಗಿ ಅಲ್ಲಗಳೆದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ‘ಅರ್ಜಿದಾರರು ತಪ್ಪು ಗ್ರಹಿಕೆಯಿಂದ ವಾದ ಮಂಡಿಸುತ್ತಿದ್ದಾರೆ. ವಾಸ್ತವದಲ್ಲಿ ಕೆರೆಗಳನ್ನು ಖಾಸಗಿಯವರಿಗೆ ನೀಡುವ ಯಾವುದೇ ಉದ್ದೇಶ ಸರ್ಕಾರದ ಮನದಲ್ಲಿ ಇಲ್ಲ’ ಎಂದರು.

ಅರ್ಜಿದಾರರ ಪರ ಮತ್ತೊಬ್ಬ ಹಿರಿಯ ವಕೀಲ ಸಿ.ಕೆ.ನಂದಕುಮಾರ್‌ ಮತ್ತು ಜಿ.ಆರ್.ಮೋಹನ್‌ ಕೂಡಾ ವಾದ ಮಂಡಿಸಿದರು. ಬಿಬಿಎಂಪಿ ಪರ ವಕೀಲ ಎಚ್.ಎಸ್‌.ಪ್ರಶಾಂತ್ ಹಾಜರಿದ್ದರು.

ಅರ್ಜಿದಾರರ ಪರ ವಕೀಲರು ಕಲ್ಪನೆಗಳ ಆಧಾರದಲ್ಲಿ ನಕರಾತ್ಮಕ ವಾದ ಮಂಡಿಸುತ್ತಿದ್ದಾರೆ. ಸಕಾರಾತ್ಮಕ ವಾದಗಳನ್ನಿಟ್ಟರೆ ಅದನ್ನು ಸರ್ಕಾರ ಒಪ್ಪಿಕೊಳ್ಳಲಿದೆ ಮತ್ತು ಅವರ ಎಲ್ಲ ಅನುಮಾನಗಳಿಗೆ ಉತ್ತರ ಕೊಡಲಿದೆ.
ಕೆ.ಶಶಿಕಿರಣ್‌ ಶೆಟ್ಟಿ, ಅಡ್ವೊಕೇಟ್‌ ಜನರಲ್‌

ವರ್ಷಕ್ಕೆ ₹650 ಕೋಟಿ ಬೇಕು...

‘ನಗರದಲ್ಲಿರುವ 185 ಕೆರೆಗಳ ನಿರ್ವಹಣೆಗೆ ವರ್ಷಕ್ಕೆ ಅಂದಾಜು ₹650 ಕೋಟಿ ಬೇಕು. ಅದಕ್ಕಾಗಿಯೇ ಸರ್ಕಾರ ಖಾಸಗಿಯವರ ನೆರವು ಪಡೆದುಕೊಳ್ಳುತ್ತಿದೆ’ ಎಂದು ಶಶಿಕಿರಣ್‌ ಶೆಟ್ಟಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

‘ಸರ್ಕಾರದ ಉದ್ದೇಶವೂ ಕೆರೆಗಳನ್ನು ಉಳಿಸಬೇಕು ಎಂಬುದೇ ಆಗಿದೆ. ವಾಸ್ತವದಲ್ಲಿ ಈ ಅರ್ಜಿ 2014ರಿಂದಲೂ ಬಾಕಿ ಇದೆ. ನಾವೀಗ 2024ರಲ್ಲಿ ಇದ್ದೇವೆ. ಕಳೆದ 10 ವರ್ಷಗಳಲ್ಲಿ ನಗರದ ಕೆರೆಗಳು ನಿರ್ವಹಣೆ, ಅಭಿವೃದ್ಧಿ ಇಲ್ಲದೆ ಬಡವಾಗಿವೆ. ಈ ಅರ್ಜಿ ಬಾಕಿ ಇರುವ ಕಾರಣದಿಂದಾಗಿಯೇ ನಗರದ ಕೆರೆಗಳು ನಳನಳಿಸುವ ಬದಲಿಗೆ ನರಳುತ್ತಿವೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.