ಬೆಂಗಳೂರು: ಕುಲಾಂತರಿ ಸಾಸಿವೆಯನ್ನು ಹೊಲಗಳಲ್ಲಿ ಬೆಳೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ಸರ್ಕಾರ ಅದಕ್ಕೆ ಅವಕಾಶ ಕೊಡದೇ ನಿಷೇಧ ಹೇರಬೇಕು ಎಂದು ಸಾಮಾಜಿಕ ಕಾರ್ಯಕರ್ತರು, ಲೇಖಕರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಎಸ್.ಜಿ. ಸಿದ್ಧರಾಮಯ್ಯ, ಶಾರದಾ ಗೋಪಾಲ, ನಾಗೇಶ ಹೆಗಡೆ, ಸಂತೋಷ ಕೌಲಗಿ, ಕೆ.ಪಿ. ಸುರೇಶ್, ಕವಿತಾ ಕುರುಗಂಟಿ, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದತೀರ್ಥ ಪ್ಯಾಟಿ, ಜಿ. ಕೃಷ್ಣಪ್ರಸಾದ್, ಅಣೆಕಟ್ಟೆ ವಿಶ್ವನಾಥ್, ಈ ಸಾಸಿವೆ ಬಳಸಿದರೆ ಮನುಷ್ಯರ ಆರೋಗ್ಯದ ಮೇಲಾಗುವ ಪರೀಣಾಮದ ಬಗ್ಗೆಯೂ ಪರೀಕ್ಷೆ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕುಲಾಂತರಿ ಸಾಸಿವೆಯಲ್ಲಿ ಕೀಟನಿರೋಧಕ ಶಕ್ತಿ ಇಲ್ಲ. ಹೈಬ್ರಿಡೈಸೇಶನ್ ತಂತ್ರಜ್ಞಾನ ಎಂದು ಕರೆಯಲಾಗುತ್ತಿದ್ದರೂ ಇಳುವರಿ ಹೆಚ್ಚಳದ ಯಾವುದೇ ಪುರಾವೆಗಳಿಲ್ಲ. ಗ್ಲುಪೋಸಿನೇಟ್ ಕಳೆನಾಶಕವನ್ನು ಸುರಿದರೆ ಸಸ್ಯಕ್ಕೆ ಏನೂ ಆಗುವುದಿಲ್ಲ ಎಂಬುದೊಂದೇ ಇದರ ಗುಣ. ಆದರೆ, ಸುತ್ತಲಿನ ಕಳೆಗಳೆಲ್ಲ ಸುಟ್ಟು ಹೋಗುತ್ತವೆ. ಕಳೆ ತೆಗೆಯುವ ಮಹಿಳೆಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮುಂದೆ ಬಳಕೆದಾರರು ಎಣ್ಣೆಗಾಣಗಳು, ಹೋಟೆಲ್‌ಗಳು ಈ ಸಾಸಿವೆ ನಿರಾಕರಿಸಿದರೆ ರೈತರ ಶ್ರಮ ಮಣ್ಣುಪಾಲಾಗಲಿದೆ ಎಂದು ತಿಳಿಸಿದ್ದಾರೆ.
ಸಾಸಿವೆಯ ಮಟ್ಟಿಗೆ ದೇಶವು ಸ್ವಾವಲಂಬಿಯಾಗಿದೆ. ಕುಲಾಂತರಿ ತಳಿಯ ಅಗತ್ಯವಿಲ್ಲ. ಆದರೂ ಹೊಲಕ್ಕೆ ನುಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಒಮ್ಮೆ ಪ್ರವೇಶ ಸಿಕ್ಕಿದರೆ ಮುಂದೆ ಕುಲಾಂತರಿ ಬದನೆ, ಮೆಣಸು, ಬೆಂಡೆ, ಟೊಮಟೊ, ಕೋಸು, ಕೊತ್ತಂಬರಿಗಳಿಗೂ ಅನುಮತಿ ಪಡೆಯುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ಸುಲಭವಾಗಲಿದೆ. ಸ್ಥಳೀಯ ತಳಿ ವೈವಿಧ್ಯ ಮೂಲೆಗುಂಪಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.