ಬೆಂಗಳೂರು: ಪ್ರಾಣಿಗಳಿಗೆ ತೊಂದರೆಯಾಗುವ ರೀತಿಯ ಫೋಟೊಗ್ರಫಿಯನ್ನು ಯಾರೂ ಮಾಡಬಾರದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸುಭಾಷ್ ಮಾಳ್ಖೇಡ ಸಲಹೆ ನೀಡಿದರು.
ವನ್ಯಜೀವಿ ಸಪ್ತಾಹದ ಅಂಗವಾಗಿ ಗುರುವಾರ ನಡೆದ ‘ಅರಣ್ಯ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವನ್ಯಜೀವಿಗಳ ಛಾಯಾಚಿತ್ರ ತೆಗೆಯುವುದು ತಪ್ಪಲ್ಲ. ಆದರೆ, ಅಲ್ಲಿ ಗದ್ದಲ ಇರಬಾರದು. ಪ್ರಾಣಿಗಳ ಏಕಾಂತಕ್ಕೆ ಅಡ್ಡಿ ಉಂಟು ಮಾಡಬಾರದು ಎಂದು ತಿಳಿಸಿದರು.
ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಜನಸಂಖ್ಯೆ ಹೆಚ್ಚಿದಂತೆ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷವೂ ಹೆಚ್ಚಾಗುತ್ತಿದೆ’ ಎಂದು ವಿಶ್ಲೇಷಿಸಿದರು.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಸಿ. ಮನೋಜ್ ಕುಮಾರ್ ಮಾತನಾಡಿ, ‘ಅರಣ್ಯ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಅರಣ್ಯ ಇಲಾಖೆಯು ಮಾಧ್ಯಮಗಳೊಂದಿಗೆ ನಿಕಟವಾಗಿದ್ದುಕೊಂಡು ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
ನಿವೃತ್ತ ಎಪಿಸಿಸಿಎಫ್ ಎಂ.ಎನ್. ಜಯಕುಮಾರ್ ಅವರ ‘ಎನ್‌ಕೌಂಟರ್ಸ್ ಇನ್ ದಿ ವೈಲ್ಡ್ 2.0’ ಛಾಯಾಚಿತ್ರಗಳ ಪ್ರದರ್ಶನವನ್ನು ಅತಿಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.