ಬೆಂಗಳೂರು: ‘ಮುಂಬೈ ಮಹಾನಗರಿಯ ಜನಜೀವನ, ಅಲ್ಲಿನ ಯಾತನೆಗಳ ಒಳನೋಟಗಳನ್ನು ಕಾಯ್ಕಿಣಿ ತಮ್ಮ ಕೃತಿಯಲ್ಲಿ ಮನಮುಟ್ಟುವಂತೆ ಬಿಂಬಿಸಿದ್ದಾರೆ’ಎಂದು ಸಂಶೋಧಕ ತಜ್ಞ ಷ.ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಕಿತ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಂಬೈಗಿಂತ ಈ ಕೃತಿಯೇ ನನಗೆ ಅದ್ಭುತವಾಗಿ ಕಂಡಿದೆ.ಎಷ್ಟೇ ಹೊತ್ತು ಗಾಳಿಗೆ ಮೈಯೊಡ್ಡಿ, ಚಹ ಹೀರುತ್ತಾ ಕೂತರೂ ಸಹನೆಯಿಂದ ಸಲಹುತ್ತಿದ್ದ ಇರಾಣಿ ಹೋಟೆಲ್‌ಗಳ ಪ್ರಾಮುಖ್ಯತೆಯನ್ನು ಇತಿಹಾಸವಾಗಿ ದಾಖಲಿಸಬೇಕಿದೆ’ ಎಂದು ಹೇಳಿದರು.
‘ಬಹುವಚನದ ನಗರ ಏಕವಚನದಲ್ಲಿ ಮಾತನಾಡುವುದು ನನಗೆ ಬಹಳ ಹಿಡಿಸಿತು. 23 ವರ್ಷಗಳ ಕಾಲ ಬಯೊಕೆಮಿಸ್ಟ್ ಆಗಿ ದುಡಿದ ನಾನು, ಮುಂಬೈನಲ್ಲಿ ಕುತೂಹಲಕಾರಿ ವ್ಯಕ್ತಿಗಳನ್ನು ಭೇಟಿ ಮಾಡಿದೆ. ಏನನ್ನು ಬರೆಯಲು ಮುಂದಾಗುತ್ತಿದ್ದೇನೊ ಆ ವಸ್ತುಸ್ಥಿತಿ ಅಲ್ಲಿರುತ್ತಿತ್ತು. ಗೊತ್ತಿಲ್ಲದನ್ನು ಗೊತ್ತುಪಡಿಸಿಕೊಳ್ಳುವ ಉದ್ದೇಶದಿಂದ ಕಥೆ ಬರೆಯಲು ಮುಂದಾದೆ’ ಎಂದು ಕೃತಿ ಲೇಖಕ ಜಯಂತ ಕಾಯ್ಕಿಣಿ ಅವರು ಸಂವಾದದಲ್ಲಿ ‘ಕಥೆ ಹುಟ್ಟುವ ಕ್ಷಣ ಯಾವುದು ಮತ್ತು ಸ್ಫೂರ್ತಿ ಏನು’ ಎಂಬ ಷ.ಶೆಟ್ಟರ್ ಅವರ ಪ್ರಶ್ನೆಗೆ ಉತ್ತರಿಸಿದರು.
‘ಕಥೆಗಳಲ್ಲಿ ನಾನು ಸೃಷ್ಟಿಸಿದ ಪಾತ್ರಗಳು ಕಣ್ಣೆದುರು ಕಾಣಿಸಿಕೊಂಡಾಗ ಖುಷಿ ಕೊಟ್ಟಿವೆ. ಬದುಕಿನ ಬಗ್ಗೆ ಪ್ರೀತಿ ಹುಟ್ಟಿಸಿವೆ. ಪ್ರತಿ ಕಥೆ ಹೊಸ ಓದನ್ನು ನೀಡುವಂಥದ್ದು. ಮುಕ್ತಾಯದ ಹಂತ ಸುಲಭವಾಗಿ ಆಗದೇ ಅನುರಣನೀಯವಾಗಿರಬೇಕು. ಕುವೆಂಪು, ಕಾರಂತ, ಲಂಕೇಶ್ ನನ್ನಲ್ಲಿ ಬದುಕಿನ ಜಿಜ್ಞಾಸೆಯನ್ನು ಹೆಚ್ಚಿಸಿದವರು. ಕುವೆಂಪು–ಕಾರಂತರ ಬಗ್ಗೆ ವಿಚಾರ ಸಂಕಿರಣ ಮಾಡುವ ಅಗತ್ಯವಿಲ್ಲ. ಅವರನ್ನು ಓದಿದರೆ ಸಾಕು. ಮನುಷ್ಯ ಲೋಕಕ್ಕೆ, ಈ ಶತಮಾನಕ್ಕೆ ಬೇಕಾದ ಎಲ್ಲ ಅಗತ್ಯಗಳೂ ಅವರ ಕೃತಿಗಳಲ್ಲಿವೆ’ ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು.
ಪುಸ್ತಕ ಕುರಿತು
ಪುಸ್ತಕ ಬೆಲೆ:₹ 250
ಪುಟಗಳು: 240
ಪ್ರಕಾಶನ: ಅಂಕಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.