ಬೆಂಗಳೂರು: ಮುಜರಾಯಿ ದೇವಸ್ಥಾನಗಳಿಗೆ ಖಾಸಗಿ ಟ್ರಸ್ಟ್ ಮಾಡುವ ಹಿಂದಿನ ಸರ್ಕಾರದ ನಿರ್ಧಾರವನ್ನು ಕೈಬಿಡಬೇಕು. ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ–ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ದೇವಸ್ಥಾನಗಳಲ್ಲಿರುವ ಅರ್ಚಕರಿಗೆ 60 ವರ್ಷವಾದಾಗ ನಿವೃತ್ತಿಗೊಳಿಸಬೇಕು ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರಲ್ಲಿ ಇದೆ. ಇದರ ವಿರುದ್ಧ ಒಕ್ಕೂಟವು ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದೆ. ಹಾಗಾಗಿ 60 ವರ್ಷ ದಾಟಿದರೂ ಅರ್ಚಕರು ಸೇವೆ ಮುಂದುವರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 35 ಸಾವಿರ ದೇವಾಲಯಗಳಿಗೆ ಪೂಜೆ ಸಾಮಗ್ರಿಗಳಿಗಾಗಿ ₹ 5,000 ನೀಡಲಾಗುತ್ತಿದೆ. ಬೆಲೆ ಏರಿಕೆಯಿಂದ ಈ ಮೊತ್ತವು ಸಾಕಾಗುತ್ತಿಲ್ಲ. ಪೂಜಾ ಸಾಮಗ್ರಿ ಮತ್ತು ಅರ್ಚಕರ ಸಂಭಾವನೆ ಎರಡೂ ಸೇರಿ ₹ 10,000 ನೀಡಬೇಕು. ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೌಕರರ ಕೊರತೆ ಇದೆ. ಹೀಗಾಗಿ, ಹೊಸದಾಗಿ ನೌಕರರನ್ನು ನೇಮಕ ಮಾಡಬೇಕು ಎಂದು ಒಕ್ಕೂಟದ ಮುಖ್ಯ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಮತ್ತು ಪದಾಧಿಕಾರಿಗಳು ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.