ಬೆಂಗಳೂರು: ಕೆಂಗೇರಿ ಉಪನಗರ ವ್ಯಾಪ್ತಿಯ ನಿವಾಸಿಗಳು ರೈಲ್ವೆ ಮೇಲ್ಸೇತುವೆ ಇಲ್ಲದೆ ನಿತ್ಯವೂ ಸಂಕಟ ಪಡುತ್ತಿದ್ದಾರೆ.
ಮೈಸೂರು, ಮಂಡ್ಯ ಕಡೆಯಿಂದ ಬರುವ ಹಾಗೂ ಮೆಜೆಸ್ಟಿಕ್ ಭಾಗದ ವಾಹನಗಳು ವಳಗೇರಿಹಳ್ಳಿ, ಹೊಯ್ಸಳ್ಳ ವೃತ್ತ, ನಾಗದೇವನಹಳ್ಳಿ ಹಾಗೂ ಕೆಂಗೇರಿ ಉಪ ನಗರಕ್ಕೆ ತೆರಳಲು ನಿತ್ಯ ಕಾಯಬೇಕಾದ ಪರಿಸ್ಥಿತಿಯಿದೆ!
ಪ್ರಯಾಣಿಕರ ಹಾಗೂ ಗೂಡ್ಸ್‌ನ 20ಕ್ಕೂ ಹೆಚ್ಚು ರೈಲುಗಳು ನಿತ್ಯ ವಳಗೇ ರಹಳ್ಳಿ ಮಾರ್ಗದ ಮೂಲಕ ಮೈಸೂರಿಗೆ ಸಂಚರಿಸುತ್ತವೆ. ರೈಲ್ವೆ ಗೇಟ್ ಬಂದ್ ಮಾಡಿದಾಗ ಎರಡು ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.
ಜತೆಗೆ ರಸ್ತೆಯೂ ಕಿರಿದಾಗಿದ್ದು, ಸವಾರರಿಗೆ ಸಮಸ್ಯೆಯಾಗುತ್ತಿದೆ. ಪಾದಚಾರಿಗಳ ಓಡಾಟಕ್ಕೂ ಸಮಸ್ಯೆಯಾಗಿದೆ. ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸವಾರರು, ಸ್ಥಳೀಯರು ಆಗ್ರಹಿಸಿದ್ದಾರೆ.
ದಿನಂಪ್ರತಿ ಈ ಮಾರ್ಗವನ್ನೇ ಬಳಸುವ ಪ್ರಯಾಣಿಕರ ಗೋಳನ್ನು ಕೇಳುವಂತಿಲ್ಲ. ಸ್ವಲ್ಪವೇ ದೂರದಲ್ಲಿ ಮೆಟ್ರೋ ನಿಲ್ದಾಣವಿದೆ. ಧಾವಂತದಲ್ಲಿ ಬಂದವರು ಅಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
ಐ.ಟಿ– ಬಿ.ಟಿ ಕಂಪನಿ, ಸರ್ಕಾರಿ ಕಚೇರಿಯ ಸಾವಿರಾರರು ಉದ್ಯೋಗಸ್ಥರು ಈ ಮಾರ್ಗದಲ್ಲೇ ಕೆಲಸಕ್ಕೆ ತೆರಳುತ್ತಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳೂ ಈ ರಸ್ತೆ ಅವಲಂಬಿಸಿದ್ದಾರೆ. ರೈಲು ಬಂದಾಗ ಅವರು ವಿಧಿಯಿಲ್ಲದೆ 10ರಿಂದ 15 ನಿಮಿಷಗಳ ಕಾಲ ರಸ್ತೆಯಲ್ಲಿಯೇ ನಿಲ್ಲುತ್ತಾರೆ.
ಮುಖ್ಯರಸ್ತೆಯ ಆಸುಪಾಸಿನಲ್ಲೇ ರೈಲ್ವೆ ಮಾರ್ಗವು ಹಾದು ಹೋಗಿದೆ. ಕೆಂಗೇರಿ ಮುಖ್ಯ ರೈಲ್ವೆ ನಿಲ್ದಾಣವೂ ಸಮೀಪದಲ್ಲಿದೆ. ಆದರೂ ಮೇಲ್ಸೇತುವೆ ನಿರ್ಮಾಣ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಮಳೆಗಾಲದಲ್ಲಿ ರೈಲು ಹೋಗುವ ತನಕವೂ ರೈಲ್ವೆ ಗೇಟ್ ಎದುರೇ ನಿಲ್ಲಬೇಕಾದ ಸ್ಥಿತಿಯಿದೆ. ಉದ್ಯೋಗಸ್ಥರು ಮಳೆಯಲ್ಲಿ ತೊಯ್ದು ಕಚೇರಿಗೆ ತೆರಳಿದರೆ, ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾದ ಅನಿವಾರ್ಯ ಇದೆ. ರೈಲು ಬರುವುದರೊಳಗೆ ಗೇಟ್ ದಾಟಲು ಹೋದವರು ಆಪತ್ತಿಗೆ ಒಳಗಾಗಿದ್ದಾರೆ. ಮೇಲ್ಸೇತುವೆ ನಿರ್ಮಾಣ ವಾದರೆ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಯತೀಶ್ ಹೇಳುತ್ತಾರೆ.
ಮೇಲ್ಸೇತುವೆ ನಿರ್ಮಾಣ ಮಾಡಬೇ ಕೆಂಬ ಬೇಡಿಕೆಯಿದೆ. ಆದರೂ, ನಿರ್ಲಕ್ಷ್ಯ ವಹಿಸಲಾಗಿದೆ. ಐ.ಟಿ ಸಿಟಿ ಹೆಗ್ಗಳಿಕೆಯ ಬೆಂಗಳೂರಿನಲ್ಲಿ ಹಳೇ ಕಾಲದ ಕಬ್ಬಿಣದ ಗೇಟ್ ವ್ಯವಸ್ಥೆಯೇ ಈಗಲೂ ಇದೆ. ಕಾವಲುಗಾರರು ಅದನ್ನೇ ಬಳಸಿ ಗೇಟ್ ಬಂದ್ ಮಾಡುವ ಹಾಗೂ ತೆರೆಯುವ ಕೆಲಸ ಮಾಡುತ್ತಿದ್ಧಾರೆ. ಇದೂ ಸಾಕಷ್ಟು ವಿಳಂಬಕ್ಕೆ ಕಾರಣ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ.
***
ರೈಲ್ವೆ ಗೇಟ್ ಬಳಿಯ ರಸ್ತೆಯಲ್ಲೂ ಗುಂಡಿಗಳು ಬಿದ್ದಿವೆ. ಮಳೆಯಲ್ಲಿ ನೀರು ಸಂಗ್ರಹವಾಗಿ ಅಪಾಯ ತಂದೊಡ್ಡುತ್ತಿದೆ.
- ಸಂದೇಶ್, ಖಾಸಗಿ ಕಂಪನಿ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.