ADVERTISEMENT

ಒಳಮೀಸಲಾತಿ ಜಾರಿಯಾಗುವವರೆಗೆ ನೇಮಕಾತಿ ಬೇಡ: ಎಲ್. ಹನುಮಂತಯ್ಯ

‘ಒಳಮೀಸಲಾತಿ@30’ ಮುಂದಿನ ಸವಾಲುಗಳು’ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಎಲ್. ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:45 IST
Last Updated 27 ಅಕ್ಟೋಬರ್ 2024, 15:45 IST
‘ಮೂಲ ಮಾದಿಗ ಮೂವ್‌ಮೆಂಟ್‌–ಎಂ3 ಕರ್ನಾಟಕ’ ಆಯೋಜಿಸಿದ ‘ಒಳಮೀಸಲಾತಿ@30’ ಮುಂದಿನ ಸವಾಲುಗಳು ಕಾರ್ಯಕ್ರಮವನ್ನು ಶಿವಶರಣ ಶ್ರೀ ಗದ್ದಿಗೆಪ್ಪ ಅಜ್ಜ ತಮಟೆ ಬಾರಿಸಿ ಉದ್ಘಾಟಿಸಿದರು., ಮುಖಂಡ ಎನ್. ಮೂರ್ತಿ, ಹುಚ್ಚಯ್ಯ ಸ್ವಾಮೀಜಿ ಲಕ್ಕುಂಡಿ, ಮೂಲ ಮಾದಿಗ ಮೂವ್‌ಮೆಂಟ್‌ ಅಧ್ಯಕ್ಷ ಜೆ.ಸಿ. ಪ್ರಕಾಶ್  ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
‘ಮೂಲ ಮಾದಿಗ ಮೂವ್‌ಮೆಂಟ್‌–ಎಂ3 ಕರ್ನಾಟಕ’ ಆಯೋಜಿಸಿದ ‘ಒಳಮೀಸಲಾತಿ@30’ ಮುಂದಿನ ಸವಾಲುಗಳು ಕಾರ್ಯಕ್ರಮವನ್ನು ಶಿವಶರಣ ಶ್ರೀ ಗದ್ದಿಗೆಪ್ಪ ಅಜ್ಜ ತಮಟೆ ಬಾರಿಸಿ ಉದ್ಘಾಟಿಸಿದರು., ಮುಖಂಡ ಎನ್. ಮೂರ್ತಿ, ಹುಚ್ಚಯ್ಯ ಸ್ವಾಮೀಜಿ ಲಕ್ಕುಂಡಿ, ಮೂಲ ಮಾದಿಗ ಮೂವ್‌ಮೆಂಟ್‌ ಅಧ್ಯಕ್ಷ ಜೆ.ಸಿ. ಪ್ರಕಾಶ್  ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಳಮೀಸಲಾತಿ ಜಾರಿಗೆ ಸಚಿವ ಸಂಪುಟ ಸಭೆಯು ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಇದು, ಜಾರಿ ಆಗುವವರೆಗೂ ಸರ್ಕಾರವು ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸಬಾರದು’ ಎಂದು ಕಾಂಗ್ರೆಸ್‌ ಮುಖಂಡ ಎಲ್. ಹನುಮಂತಯ್ಯ ಆಗ್ರಹಿಸಿದರು.

‘ಮೂಲ ಮಾದಿಗ ಮೂವ್‌ಮೆಂಟ್‌–ಎಂ3 ಕರ್ನಾಟಕ’ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಒಳಮೀಸಲಾತಿ@30’ ಮುಂದಿನ ಸವಾಲುಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ನ ಒಪ್ಪಿಗೆ ಪಡೆದು ಒಳ ಮೀಸಲಾತಿ ಜಾರಿ ಮಾಡಲಿದ್ದಾರೆ. ಜಾರಿ ಮಾಡದೇ ಇದ್ದರೆ ಮುಂದಿನ ತೀರ್ಮಾನ ಕೈಗೊಳ್ಳೋಣ. 30 ವರ್ಷಗಳಿಂದ ನಡೆದು ಬಂದ ಈ ಹೋರಾಟ ಇಲ್ಲಿಗೆ ನಿಲ್ಲದೇ, ಒಳ ಮೀಸಲಾತಿ ಜಾರಿ ಆಗುವವರೆಗೂ ಮುಂದುವರಿಯಬೇಕು’ ಎಂದು ತಿಳಿಸಿದರು.

ADVERTISEMENT

‘ಜಾತಿವಾರು ಜನಗಣತಿ ವರದಿಯನ್ನೂ ರಾಜ್ಯ ಸರ್ಕಾರ ಅಂಗೀಕರಿಸಿ, ಅದರ ಶಿಫಾರಸುಗಳನ್ನು ಜಾರಿ ಮಾಡಬೇಕು. ಒಳ ಮೀಸಲಾತಿಗೆ ಅದು ಪೂರಕವಾಗಲಿದೆ. ಅಂಕಿ ಅಂಶಗಳು ಸರಿಯಿಲ್ಲ. ಹೊಸತಾಗಿ ಜಾತಿವಾರು ಜನಗಣತಿ ಮಾಡಬೇಕೆಂದು ಕೆಲವರು ಹೇಳುತ್ತಿದ್ದಾರೆ. ಈ ನಡುವೆ ಆದಿಕರ್ನಾಟಕ, ಆದಿ ದ್ರಾವಿಡ ಎಂದು ಹಲವರು ಬರೆಸಿದ್ದಾರೆ. ಇದು ಸಮಸ್ಯೆಯಾಗಿದೆ’ ಎಂದು ವಿವರ ನೀಡಿದರು.

ಮುಖಂಡ ಗೋನಾಳ್ ಭೀಮಪ್ಪ ಮಾತನಾಡಿ, ‘ಸದಾಶಿವ ಆಯೋಗ ನೀಡಿರುವ ವರದಿ ಬಹಿರಂಗಗೊಳ್ಳದೇ ಇರುವುದರಿಂದ ಅಂಕಿ–ಅಂಶ ಯಾರಿಗೂ ಗೊತ್ತಿಲ್ಲ. ಪೆನ್ಸಿಲ್‌ನಲ್ಲಿ ಬರೆದಿದ್ದಾರೆ ಎಂಬುದೆಲ್ಲ ಊಹಾಪೋಹ. ದಕ್ಷಿಣ ಕರ್ನಾಟಕದಲ್ಲಿ ಎಕೆ-ಎಡಿ ಬಗ್ಗೆ ಗೊಂದಲ ಉಂಟಾಗಿರುವುದರಿಂದ ಸಮಸ್ಯೆಯಾಗಿದೆ’ ಎಂದರು.

ಕುಕನೂರ ಇಟಗಿಯ ಮರುಳಸಿದ್ದೇಶ್ವರ ಪುಣ್ಯಾಶ್ರಮದ ಗದ್ದಿಗೆಪ್ಪ ಅಜ್ಜ ಮಾತನಾಡಿ, ‘ಮೂವತ್ತು ವರ್ಷದಿಂದ ಹೋರಾಟ ನಡೆಸಿದ್ದು, ವಿಜಯಪುರದ ಪಾದಯಾತ್ರೆ ವೇಳೆ ಏಳು ಮಂದಿ ಮೃತಪಟ್ಟಿದ್ದರು. ಯುವಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೆ ಸ್ವಚ್ಛತೆ ಮಾಡುವವರು ನಾವೇ ಆಗಿರುವುದರಿಂದ ಒಂದು ದಿನ ನಮ್ಮ ಕೆಲಸ ನಿಲ್ಲಿಸಿದರೆ ಹೋರಾಟಕ್ಕೆ ಜಯ ಸಿಗಲಿದೆ’ ಎಂದು ಆಶಿಸಿದರು.

ಮೂಲ ಮಾದಿಗ ಮೂವ್‌ಮೆಂಟ್‌ ಅಧ್ಯಕ್ಷ ಜೆ.ಸಿ. ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಲಕ್ಕುಂಡಿಯ ಹುಚ್ಚಯ್ಯ ಸ್ವಾಮೀಜಿ, ಶಾಸಕ ಶ್ರೀನಿವಾಸ್, ವಿಧಾನ ಪರಿಷತ್‌ ಸದಸ್ಯರಾದ ಸುಧಾಮ ದಾಸ್, ಡಿ. ತಿಮ್ಮಯ್ಯ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಆರ್. ಧರ್ಮಸೇನಾ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಮುಖಂಡರಾದ ಮಾರಸಂದ್ರ ಮುನಿಯಪ್ಪ, ಎನ್‌.ಮೂರ್ತಿ, ಶಂಕರಪ್ಪ, ಎಚ್‌.ಆರ್‌. ಭೀಮಾಶಂಕರ್‌, ಅನಿಲ್‌ ಕುಮಾರ್‌, ವೆಂಕಟೇಶ್‌ ದೊಡ್ಡೇರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.